





ವಿಟ್ಲ: ಯುವಕ ಮಂಡಲ ( ರಿ ) ವಿಟ್ಲ ಇದರ ಆಶ್ರಯದಲ್ಲಿ 47ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ವಿಟ್ಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.



ವಿಟ್ಲ ಸರಕಾರಿ ಪ್ರೌಢ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿಶಂಕರ ಶಾಸ್ತ್ರಿ ದೀಪ ಪಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲಾ ಧರ್ಮಗಳನ್ನು ಗೌರವಿಸಬೇಕು, ತಂದೆ ತಾಯಿ ದೇವರಿಗೆ ಸಮಾನ ಅವರನ್ನು ಬದುಕಿರುವಾಗಲೇ ಗೌರವದಿಂದ ನೋಡಬೇಕು. ಮನೆ ಮಕ್ಕಳಿಗೆ ಉತ್ತಮ ಸಂಸ್ಕಾರದ ಬಗ್ಗೆ ತಿಳುವಳಿಕೆ ಬರುವ ಹಾಗೆ ಮಾಡಬೇಕು. ಕಾರ್ಯಕ್ರಮ ಸಂಘಟನೆ ಮಾಡುವುದು ಸುಲಭದ ಕೆಲಸ ಅಲ್ಲ .ಈ ಕಾರ್ಯಕ್ರಮದ ಹಿಂದೆ ಯುವಕ ಮಂಡಲದ ಸದಸ್ಯರ ಶ್ರಮ ಇದೆ. ವಿಟ್ಲ ತಾಲೂಕು ಆಗಲು ಎಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಲ್ಲಿಕಾ ಪಕ್ಕಳ ( ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರು), ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಹರೀಶ ಪೂಜಾರಿ, ವಿಟ್ಲ ಜೆಸಿಐ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ವಸಂತ್ ಕುಮಾರ್ ಶೆಟ್ಟಿ ಎರ್ಮೆನಿಲೆ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ನಿರ್ದೇಶಕ ರಜತ್ ಆಳ್ವ, ವಿಟ್ಲ ಯುವಕ ಮಂಡಲದ ಗೌರವಾಧ್ಯಕ್ಷ ಬಿ.ಎಸ್ ರಮೇಶ ಉಪಸ್ಥಿತರಿದ್ದರು.


ಮಾಜಿ ಅಧ್ಯಕ್ಷ ಸುದರ್ಶನ ಪಡಿಯಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಯುವಕ ಮಂಡಲದ ಅಧ್ಯಕ್ಷ ಸುಧೀರ್ ನಾಯ್ಕ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಡಾ. ಲೋಕರಾಜ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ನಿಕಟ ಪೂರ್ವ ಅಧ್ಯಕ್ಷ ವಸಂತ ಶೆಟ್ಟಿ ವಂದಿಸಿದರು.ಕೋಶಾಧಿಕಾರಿ ಜನಾರ್ಧನ ಪದ್ಮಶಾಲಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಗಂಗಾಧರ ,ಉಪಾಧ್ಯಕ್ಷರಾದ ಆನಂದ, ವಿ.ಆರ್ ಜಗದೀಶ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ರಾಜರಾಮ ಶೆಟ್ಟಿ ಕೋಲ್ಪೆಗುತ್ತು ಹಗ್ಗ ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಿದರು. ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ಶಾರದಾ ಆರ್ಟ್ಸ್ ಐಸಿರಿ ಕಲಾವಿದರು ಮಂಜೇಶ್ವರ ಇವರಿಂದ “ಕಲ್ಜಿಗದ ಮಾಯ್ಕಾರೆ ಪಂಜುರ್ಲಿ” ನಾಟಕ ಪ್ರದರ್ಶಿಸಲಾಯಿತು.


