



ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಅಜಿತ್ ಪವಾರ್ ಬಣದ ಎನ್ಸಿಪಿ ಹಿರಿಯ ನಾಯಕ ಬಾಬಾ ಸಿದ್ದಿಕಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವಂತಹ ಘಟನೆ ಮುಂಬೈನ ಬಾಂದ್ರಾ ಪಶ್ಚಿಮ ಭಾಗದಲ್ಲಿ ನಡೆದಿದೆ. ಎದೆ, ಹೊಟ್ಟೆ ಭಾಗಕ್ಕೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಗಂಭೀರ ಗಾಯಗೊಂಡಿದ್ದ ಸಿದ್ದಿಕಿರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬಾಂದ್ರಾ ಪೂರ್ವದ ಶಾಸಕರಾಗಿರುವ ಅವರ ಪುತ್ರ ಜೀಶಾನ್ ಅವರ ಕಚೇರಿಯಲ್ಲಿ ಶನಿವಾರ ರಾತ್ರಿ 9:30 ರ ಸುಮಾರಿಗೆ ಸಿದ್ದಿಕಿ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಸಿದ್ದಿಕಿ ಮೇಲೆ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಸಚಿವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಗುಂಡು ಎದೆಗೆ ತಗುಲಿದ್ದರಿಂದ ಅವರು ಸಾವಿಗೀಡಾಗಿದ್ದಾರೆ.
ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕಿ ಅವರು 48 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಪಕ್ಷವನ್ನು ತೊರೆದು ಅಜಿತ್ ಪವಾರ್ ಅವರ ಎನ್‌ಸಿಪಿಗೆ ಸೇರಿದ್ದರು. ಜೀಶನ್ ಸಿದ್ದಿಕಿ ಅವರನ್ನು ಆಗಸ್ಟ್‌ನಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿತ್ತು.








