Sunday, June 29, 2025
spot_imgspot_img
spot_imgspot_img

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಆರೋಪಿಗೆ 30 ಸಾವಿರ ರೂ. ದಂಡ , 21 ವರ್ಷ ಜೈಲು..!

- Advertisement -
- Advertisement -

ದಾವಣಗೆರೆ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ ವ್ಯಕ್ತಿಗೆ 21 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್ ಸಿ-1 ನ್ಯಾಯಾಲಯ ಆದೇಶಿಸಿದೆ.

ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಂತೋಷ್ ಅಲಿಯಾಸ್ ಶಾಂತಕುಮಾರ್‌ (35) ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಆತ 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. 2 ತಿಂಗಳ ನಂತರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಶಿವಮೊಗ್ಗದ ವೈದ್ಯರ ಬಳಿ ಕರೆದೊಯ್ದು ಪರೀಕ್ಷಿಸಿದಾಗ ಆಕೆ 2 ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಗಿತ್ತು.

ವೈದ್ಯರ ಸೂಚನೆ ಮೇರೆಗೆ ಬಾಲಕಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಸಖಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಆಕೆ ನೀಡಿದ ದೂರಿನ ಮೇರೆಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ಪೋಕ್ಸೋ ಪ್ರಕರಣ (POCSO Case) ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸ್ ನಿರೀಕ್ಷಕ ಟಿ.ವಿ.ದೇವರಾಜ್, ಸಂತೋಷ್‌ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಶ್ರೀರಾಮ ನಾರಾಯಣ ಹೆಗಡೆಯವರಿದ್ದ ಏಕಸದಸ್ಯ ಪೀಠ, ಆಪರಾಧಿಯ ಆರೋಪ ಸಾಬೀತಾಗಿದ್ದರಿಂದ 21 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ವಸೂಲು ಮಾಡಿದ ದಂಡದ ಒಟ್ಟು ಮೊತ್ತ 30,000 ರೂ.ಗಳನ್ನು ಪ್ರಕರಣದ ಸಂತ್ರಸ್ತೆಗೆ ನೀಡುವಂತೆ ಹಾಗೂ ಸಂತ್ರಸ್ತೆಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

Related news

error: Content is protected !!