ಬೆಂಗಳೂರು: ರಾಜ್ಯದ ಸರಕಾರಿ ಶಾಲಾ ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರಕಾರ, ಈ ಸಂಬಂಧ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಕರಡು ನಿಯಮಗಳ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು ಶಿಕ್ಷಕರು ಮತ್ತು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆಯ ನಿಯಂತ್ರಣ) (ತಿದ್ದುಪಡಿ) ನಿಯಮಗಳು-2026’ರ ಕರಡು ಅಧಿಸೂಚನೆಯನ್ನು ನ.12ರಂದು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ಕರಡು ನಿಯಮಗಳ ಪ್ರಕಾರ, ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಸೇರಿದಂತೆ ಪ್ರಮುಖ ಸರಕಾರಿ ಶಾಲೆಗಳಲ್ಲಿನ ಖಾಲಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಕೆಪಿಎಸ್ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ವರ್ಗಾವಣೆ ಸಂದರ್ಭದಲ್ಲಿ ಹೆಚ್ಚುವರಿ ಪ್ರೋತ್ಸಾಹಕ ಅಂಕಗಳನ್ನು ನೀಡುವ ಪ್ರಸ್ತಾವವೂ ಇದೆ.ವರ್ಗಾವಣೆ ಪ್ರಕ್ರಿಯೆಯಲ್ಲಿ ವಿವಿಧ ವರ್ಗಗಳಿಗೆ ಶೇಕಡಾವಾರು ಮಿತಿಯನ್ನು ನಿಗದಿಪಡಿಸಲಾಗಿದೆ.
ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆಗೆ ಶೇ.7, ವಲಯ ವರ್ಗಾವಣೆಗೆ ಶೇ.4, ವಿಭಾಗದೊಳಗಿನ ಕೋರಿಕೆ ವರ್ಗಾವಣೆಗೆ ಶೇ.2 ಹಾಗೂ ವಿಭಾಗದ ಹೊರಗಿನ ಕೋರಿಕೆ ವರ್ಗಾವಣೆಗೆ ಶೇ.2ರಷ್ಟು ಮಿತಿ ನಿಗದಿಪಡಿಸಲು ಪ್ರಸ್ತಾಪಿಸಲಾಗಿದೆ.ಶಿಕ್ಷಕರು ಸೇವೆ ಸಲ್ಲಿಸಿದ ವಲಯದ ಆಧಾರ ಶಿಕ್ಷಕರು ಸೇವೆ ಸಲ್ಲಿಸಿದ ವಲಯದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ‘ಸಿ’ ವಲಯದಲ್ಲಿ ಪ್ರತಿ ವರ್ಷದ ಸೇವೆಗೆ 3 ಅಂಕ, ‘ಬಿ’ ವಲಯಕ್ಕೆ 2 ಅಂಕ ಹಾಗೂ ‘ಎ’ ವಲಯಕ್ಕೆ 1 ಅಂಕ ನೀಡುವ ಪ್ರಸ್ತಾವವಿದೆ. ಪ್ರಸ್ತುತ ಶಾಲೆಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಹೆಚ್ಚುವರಿಯಾಗಿ ಒಂದು ಅಂಕ ನೀಡಲು ಉದ್ದೇಶಿಸಲಾಗಿದೆ.ನಿರ್ಣಾಯಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಸೇವಾ ಅವಧಿಗೆ ಅನುಗುಣವಾಗಿ ಹೆಚ್ಚುವರಿ ಅಂಕಗಳನ್ನು ನೀಡುವ ಪ್ರಸ್ತಾವವಿದೆ.
ಇಂತಹ ಹುದ್ದೆಗಳಲ್ಲಿ ಕನಿಷ್ಠ 9 ವರ್ಷ ಸೇವೆ ಸಲ್ಲಿಸುವುದು ಕಡ್ಡಾಯವಾಗಿರಲಿದೆ.ಇನ್ನು ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕರು, ಅವರ ಪತಿ ಅಥವಾ ಪತ್ನಿ ಹಾಗೂ ಮಕ್ಕಳ ವೈದ್ಯಕೀಯ ಸಮಸ್ಯೆಗಳು ಮತ್ತು ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ಶಿಕ್ಷಕರ ವರ್ಗಾವಣೆ ಕೋರಿಕೆಗಳಿಗೆ ವಿಶೇಷ ಆದ್ಯತೆ ನೀಡಲು ಕರಡು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಗರ್ಭಿಣಿ ಶಿಕ್ಷಕಿಯರು ಹಾಗೂ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ಮಹಿಳಾ ಶಿಕ್ಷಕಿಯರಿಗೂ ವಿಶೇಷ ರಿಯಾಯಿತಿ ನೀಡುವ ಪ್ರಸ್ತಾವವಿದೆ.
ವರ್ಗಾವಣೆ ಪ್ರಕ್ರಿಯೆಯನ್ನು ಆದ್ಯತಾ ಪಟ್ಟಿಯ ಆಧಾರದಲ್ಲಿ ತಂತ್ರಾಂಶದ ಮೂಲಕ ಆನ್ಲೈನ್ ಕೌನ್ಸೆಲಿಂಗ್ ವ್ಯವಸ್ಥೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.ಕರಡು ಅಧಿಸೂಚನೆ ಪ್ರಕಟವಾದ ದಿನದಿಂದ 15 ದಿನಗಳೊಳಗೆ ಆಕ್ಷೇಪಣೆ ಹಾಗೂ ಸಲಹೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಂದ ಸ್ವೀಕರಿಸಲಾದ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ಸರಕಾರ ಅಂತಿಮ ನಿಯಮಗಳನ್ನು ಪ್ರಕಟಿಸಲಿದೆ.








