ಲಖನೌ: ಪೊಲೀಸರು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿರುವ ಹೊರತಾಗಿಯೂ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈಗ ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ.
ಬಾಲಕಿಯನ್ನು ಹತ್ಯೆ ಮಾಡಿ ಹೃದಯ ಹಾಗೂ ಶ್ವಾಸಕೋಶವನ್ನು ಕಾಮುಕರು ಕೊಂಡೊಯ್ದಿದ್ದಾರೆ. ಈ ಭಯಾನಕ ಘಟನೆಗೆ ದೇಶವೇ ಬೆಚ್ಚಿ ಬಿದ್ದಿದೆ.ಪರಶುರಾಮ್ ಎಂಬಾತ ಈ ಪ್ರಕರಣದ ಪ್ರಮುಖ ಆರೋಪಿ. ಈತ 1999ರಲ್ಲೇ ಮದುವೆ ಆಗಿದ್ದರೂ ಈತನಿಗೆ ಮಕ್ಕಳಾಗಿರಲಿಲ್ಲ.
ಈ ವೇಳೆ ಮಾಟ-ಮಂತ್ರ ಮಾಡುವವರ ಬಳಿ ಈತ ತೆರಳಿದ್ದ. ಅವರು ಬಾಲಕಿಯೊಬ್ಬಳ ಹೃದಯ ಹಾಗೂ ಶ್ವಾಸಕೋಶ ಬೇಕು ಎಂದು ಹೇಳಿದ್ದ.ತನ್ನ ಸೋದರಳಿಯ ಅಂಕುಲ್ ಹಾಗೂ ಆತನ ಗೆಳೆಯ ಬೀರನ್ ಬಳಿ ತೆರಳಿದ್ದ ಪರಶುರಾಮ್ ಬಾಲಕಿಯೊಂದರ ಶ್ವಾಸಕೋಶ ಹಾಗೂ ಹೃದಯ ತಂದುಕೊಟ್ಟರೆ ಹಣ ನೀಡುವುದಾಗಿ ಪುಸಲಾಯಿಸಿದ್ದ.
ಹೀಗಾಗಿ 6 ವರ್ಷದ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಇಬ್ಬರೂ ಕಾಡಿಗೆ ಕರೆದೊಯ್ದಿದ್ದರು. ಕೊಲೆ ಮಾಡುವುದಕ್ಕೂ ಮೊದಲೂ ಇಬ್ಬರೂ ಸೇರಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ನಂತರ ಆಕೆಯ ಹೃದಯ ಹಾಗೂ ಶ್ವಾಸಕೋಶವನ್ನು ತೆಗೆದಿದ್ದಾರೆ.ಕುಟುಂಬದವರು ಬಾಲಕಿ ಕಾಣೆಯಾದ ಬಗ್ಗೆ ದೂರು ದಾಖಲು ಮಾಡಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ ಕಾಡಿನಲ್ಲಿ ಶವ ಪತ್ತೆ ಆಗಿದೆ. ಬಾಲಕಿಯ ಹೃದಯ ಹಾಗೂ ಶ್ವಾಸಕೋಶ ಕಾಣೆ ಆಗಿರುವ ವಿಚಾರ ಪತ್ತೆ ಆಗಿದೆ. ನಂತರ ಅಂಕುಲ್ ಹಾಗೂ ಬೀರನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಪರಶುರಾಮ್ ಹೆಸರನ್ನು ಬಾಯ್ಬಿಟ್ಟಿದ್ದಾರೆ.