




ಮಡಿಕೇರಿ: ಕೊಡಗಿನಲ್ಲಿ ಕೇರಳ ಮೂಲದ ಉದ್ಯಮಿಯೊಬ್ಬರನ್ನು ಕೊಲೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮೃತನನ್ನು ಕೇರಳದ ಕಣ್ಣೂರಿನ ಭಾಸ್ಕರನ್ ಕೊಯಿಲಿ ಎಂಬವರ ಪುತ್ರ ಪ್ರದೀಪ್ ಕೊಯಿಲಿ (49) ಎಂದು ಗುರುತಿಸಲಾಗಿದೆ.ಕೊಡಗಿನ ಬಿ ಶೆಟ್ಟಿಗೇರಿ ಗ್ರಾಮದಲ್ಲಿನ ತೋಟದ ಮನೆಯಲ್ಲಿ ಪ್ರದೀಪ್ ವಾಸವಿದ್ದಾಗ ಘಟನೆ ಬುಧವಾರ ನಡೆದಿದೆ. ಕೊಡಗು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಣ ಗ್ರಾಮದಲ್ಲಿ ಕಾಫಿ ತೋಟ ಹೊಂದಿರುವ ಪ್ರದೀಪ್ ಹಲವು ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿದ್ದರು. ಮನೆ ತೋಟದ ಮಧ್ಯೆ ಇದ್ದುದರಿಂದ ಜನರ ಓಡಾಟ ಕಡಿಮೆ ಇತ್ತು.ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಗೋಣಿಕೊಪ್ಪದ ಶವಾಗಾರಕ್ಕೆ ರವಾನಿಸಿದ್ದಾರೆ. ಬೆರಳಚ್ಚು ತಂಡ ಹಾಗೂ ಶ್ವಾನದಳ ಕೂಡ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸರು ಕೊಲೆ ಪ್ರಕರಣದ ಶಂಕೆ ವ್ಯಕ್ತಪಡಿಸಿದ್ದು, ಎಸ್ಪಿ ಕೆ ರಾಮರಾಜನ್ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಕಣ್ಣಾನೂರಿನ ಕೊಯಿಲಿ ಆಸ್ಪತ್ರೆಯ ಮಾಲೀಕ ಪ್ರದೀಪ್ ಗ್ರಾಮದ ಜನರೊಂದಿಗೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಪ್ರಾಥಮಿಕ ತನಿಖೆಯಿಂದ ಪ್ರದೀಪ್ ನನ್ನು ಕುತ್ತಿಗೆಗೆ ನೈಲಾನ್ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.








