


ಆತ್ಮಾಹುತಿ ಬಾಂಬ್ ದಾಳಿಯಲ್ಲಿ 13 ಪಾಕ್ ಸೈನಿಕರು ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ವಜೀರಿಸ್ತಾನ್ ಜಿಲ್ಲೆಯಲ್ಲಿ ನಡೆದಿದೆ.
ಈ ದಾಳಿಯಲ್ಲಿ ಸ್ಥಳೀಯ ಅಧಿಕಾರಿಗಳು ಸೇರಿ 29 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಆತ್ಮಾಹುತಿ ಬಾಂಬ್ ಇದ್ದ ವಾಹನವು ಮಿಲಿಟರಿ ಬೆಂಗಾವಲು ಪಡೆಯ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಂಬ್ ಸ್ಫೋಟಗೊಂಡಿದ್ದು, 13 ಸೈನಿಕರು ಮೃತಪಟ್ಟಿದ್ದಾರೆ. ಜೊತೆಗೆ ಎರಡು ಮನೆಯ ಛಾವಣಿ ಕುಸಿದು 6 ಮಕ್ಕಳು, 10 ಜನ ಸೇನಾ ಸಿಬ್ಬಂದಿ ಸೇರಿದಂತೆ ಒಟ್ಟು 29 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಗಾಯಗೊಂಡವರ ಪೈಕಿ ನಾಲ್ವರು ಸೈನಿಕರ ಸ್ಥಿತಿ ಗಂಭೀರವಾಗಿದೆ. ಆರಂಭದಲ್ಲಿ ಈ ಆತ್ಮಾಹುತಿ ದಾಳಿಯ ಹೊಣೆಯನ್ನು ಯಾರು ಹೊತ್ತುಕೊಂಡಿರಲಿಲ್ಲ. ಆದರೆ ಈ ಸ್ಥಳದಲ್ಲಿ ಆಗಾಗ ಪಾಕಿಸ್ತಾನಿ ತಾಲಿಬಾನ್ ಉಗ್ರರು ದಾಳಿ ನಡೆಸುತ್ತಿರುತ್ತಾರೆ. ಹೀಗಾಗಿ ಅವರೇ ಈ ದಾಳಿಯನ್ನು ಕೂಡ ನಡೆಸಿರಬಹುದು ಎಂದು ಶಂಕಿಸಲಾಗಿತ್ತು. ಸದ್ಯ ಪಾಕಿಸ್ತಾನಿ ತಾಲಿಬಾನ್ನ ಒಂದು ಬಣವಾದ ಹಫೀಜ್ ಗುಲ್ ಬಹದ್ದೂರ್ ತಂಡ ದಾಳಿ ನಡೆಸಿರಬಹುದು ಎನ್ನಲಾಗಿದೆ.