✍️ ಸರ್ವಮಂಗಳ ಕೆ. ವಿಟ್ಲ



ಮೊಬೈಲ್ ಗೀಳಿನಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿರುವ ಹೊತ್ತಿನಲ್ಲಿಯೇ ಪುಟ್ಟ ಕುವರಿಯೊಬ್ಬಳು ಮೊಬೈಲ್ ಮೂಲಕವೇ ಅಡುಗೆಯನ್ನು ಕಲಿತು ಸೈ ಎನಿಸಿಕೊಳ್ಳುತ್ತಿದ್ದಾಳೆ. ಅವಳೇ ವಿಟ್ಲದ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಕು. ಮನಸ್ವಿ ಆರ್ ಕೆ.

ಅಮ್ಮ ತಯಾರಿಸಿದ ತಿಂಡಿಗಳನ್ನು ಮೆಲ್ಲುತ್ತಾ, ಹೆಣ್ಣು ಮಕ್ಕಳ ಸಹಜ ಆಟವೆನಿಸಿದ ಅಡುಗೆಯ ಆಟವನ್ನು ಆಡುತ್ತಾ ಕುಣಿದು ನಲಿಯುವ ವಯಸ್ಸಿನಲ್ಲಿ ತಾನೇ ಆಸಕ್ತಿಯಿಂದ ಯೂ ಟ್ಯೂಬ್ ನೋಡುತ್ತಲೇ ಅಡುಗೆಯನ್ನು ಕಲಿತು ಮನೆಯವರಿಗೆ ಸವಿರುಚಿಗಳನ್ನು ಉಣಬಡಿಸುತ್ತಲೇ ಇದೀಗ ನಮ್ಮೂರಿನ ಟಿವಿ ಚಾನೆಲ್ ಗಳಲ್ಲಿ ಅಡುಗೆಯ ಕಾರ್ಯಕ್ರಮ ನೀಡುವ ಹಂತಕ್ಕೆ ಬೆಳೆದು ನಿಂತು ತನ್ನ ಪುಟಾಣಿ ಕೈಗಳ ಮೂಲಕವೇ ಎಲ್ಲರೂ ಹೊಸ ಹೊಸ ರುಚಿಯನ್ನು ಸವಿಯುವಂತೆ ಮಾಡುತ್ತಿದ್ದಾಳೆ. ಹೊಸತರ ಹುಡುಕಾಟದೊಡನೆ ಆಸಕ್ತಿ, ಕುತೂಹಲದಿಂದ ಎಲ್ಲವನ್ನೂ ಗಮನಿಸುತ್ತಾ, ಹೊಸ ಪ್ರಯೋಗಗಳನ್ನು ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರಳಾಗುತ್ತಿದ್ದಾಳೆ.

ರಜೆ ಸಿಕ್ಕಿದರೆ ಸಾಕು ಮೊಬೈಲ್ ಹಿಡಿದು ಗೇಮ್ ಆಡುವ, ರೀಲ್ಸ್ ನೋಡುವ ಅಥವಾ ಟಿವಿ ಮುಂದೆ ಕುಳಿತು ಕಾರ್ಟೂನ್ ನೋಡುವ ವಯಸ್ಸಿನಲ್ಲಿ ಮೊಬೈಲ್, ಟಿವಿಗಳಲ್ಲಿ ಬರುವ ಅಡುಗೆ ಕಾರ್ಯಕ್ರಮಗಳನ್ನು ನೋಡುತ್ತಾ ಪಾಕಪ್ರವೀಣೆಯಾಗುತ್ತಿದ್ದಾಳೆ.
ಸುಮಾರು ನಾಲ್ಕನೇ ತರಗತಿಯಿಂದ ಅಡುಗೆಮನೆ ಪಯಣ ಶುರುವಾಗಿದೆ ಅನ್ನುತ್ತಾ, ತನ್ನ ಪುಟ್ಟ ಪುಟ್ಟ ಕೈಗಳಿಂದ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವ ಈಕೆಯ ವಯಸ್ಸಿಗೆ ಮೀರಿದ ಪ್ರೌಢತೆ, ತುಂಟ ಬಾಲೆಯ ಅಡುಗೆ ಮನೆಯ ಪ್ರಾವೀಣ್ಯತೆಗೆ ಯಾರಾದರೂ ತಲೆದೂಗುವಂತೆ ಮಾಡುತ್ತದೆ. ಓದಿನಲ್ಲೂ ಮನಸ್ವಿ ಸದಾ ಮುಂದು. ಭರತನಾಟ್ಯ, ಸಂಗೀತ, ಕೀಬೋರ್ಡ್, ಡ್ರಾಯಿಂಗ್, ಕ್ರಾಫ್ಟ್ ಮತ್ತು ವಿಶಿಷ್ಟ ವಿಭಿನ್ನ ಮಾಡೆಲ್ ತಯಾರಿಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಈಕೆಯ ಮಾತುಗಳು ಮನಸನ್ನು ಸೆಳೆಯುತ್ತವೆ. ಸಾಕಷ್ಟು ಕಡೆ ಭರತನಾಟ್ಯ, ಕೀಬೋರ್ಡ್ ಕಾರ್ಯಕ್ರಮಗಳನ್ನು ಕೂಡಾ ನೀಡಿರುವ ಈಕೆಗೆ ಅಕ್ಕ ಮಹಿಮಾ ಆರ್. ಕೆ. ಸದಾ ಪ್ರೋತ್ಸಾಹಿಸುತ್ತಾಳೆ.
ಈಕೆಯು ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್ ಇವರ ಬಳಿ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದು, ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ತೇರ್ಗಡೆಯಾಗಿದ್ದಾಳೆ. ಜೊತೆಗೆ, ಕೀಬೋರ್ಡ್ ಅನ್ನು ನಟರಾಜ್ ಶರ್ಮ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾಳೆ.
ರಜೆ ಸಿಕ್ಕಾಗ ಮೊಬೈಲ್, ಟಿವಿ ಎಂದು ಕಾಲ ಕಳೆಯದೆ ಹೊಸ ರುಚಿ, ವಿವಿಧ ಕ್ರಾಫ್ಟ್ ತಯಾರಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಈಕೆ ವಿಟ್ಲದ ನಿವಾಸಿ ರವಿಶಂಕರ ಕುಳಮರ್ವ ಮತ್ತು ಡಾl ಮೈತ್ರಿ ಭಟ್ ದಂಪತಿ ಪುತ್ರಿ. ತಂದೆ ಬಂಟ್ವಾಳದ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ ವಿಭಾಗದ ಪ್ರಾಧ್ಯಾಪಕರು. ತಾಯಿ ಸದ್ಯ ಗೃಹಿಣಿ. ಅಂತೆಯೇ, ವಿಟ್ಲದ ಖ್ಯಾತ ಜ್ಯೋತಿಷಿ ಕುಳಮರ್ವ ಸುಬ್ರಹ್ಮಣ್ಯ ಭಟ್ ಅವರ ಮುದ್ದಿನ ಮೊಮ್ಮಗಳು ಈಕೆ.
ಇತ್ತೀಚೆಗೆ ‘ನಮ್ಮ ಟಿವಿ – ನಮ್ಮ ರುಚಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಸಪಾಕ ತಯಾರಿಸಿ, ಎಲ್ಲರ ಮನ ಗೆದ್ದಿರುವ ಪುಟಾಣಿ ಮನಸ್ವಿಗೆ ಮುಂದೆ ಭವ್ಯ ಭವಿಷ್ಯವಿದೆ ಅನ್ನುತ್ತಾರೆ ನಮ್ಮ ಟಿವಿಯ ನಿರೂಪಕಿ ಹಾಗೂ ಕಾರ್ಯಕ್ರಮ ನಿರ್ವಾಹಕಿ ಶ್ರೀಮತಿ ಸುಕನ್ಯಾ ಅವರು. ಈ ಪುಟ್ಟ ಮನಸ್ವಿಯ ಭವಿಷ್ಯ ಸದಾ ಉಜ್ವಲವಾಗಿರಲಿ ಎಂಬ ಹಾರೈಕೆಯೊಡನೆ ‘ದೊಡ್ಡವಳಾದಾಗ ಏನಾಗುತ್ತೀಯಾ?’ ಎಂಬ ಪ್ರಶ್ನೆಗೆ ‘ಮೋದಿಯಂತೆ ಪ್ರೈಮ್ ಮಿನಿಸ್ಟರ್’ ಎನ್ನುವ ಈ ಪುಟ್ಟ ಮಿದುಳಿನ ದೊಡ್ಡ ಕನಸು ನನಸಾಗಲಿ ಎಂದು ಆಶಿಸೋಣವೇ…
✍️ ಸರ್ವಮಂಗಳ ಕೆ. ವಿಟ್ಲ