Thursday, May 2, 2024
spot_imgspot_img
spot_imgspot_img

ನಾ ಕಂಡ ನನ್ನ ಕೃಷ್ಣ

- Advertisement -G L Acharya panikkar
- Advertisement -

ಕೃಷ್ಣ ಎಂದರೆ ಏನೋ ಸುಖ. ಅವನ ಗುಣಗಾನ ಕಿವಿಗಪ್ಪುವ, ಕೇಳಬಯಸುವ ಸುಸ್ವರ. ಬಾಲಲೀಲೆಗಳು ಪವಾಡವೇ, ಮನುಕುಲಕ್ಕೆ ತುಲನೆ ಮಾಡಲಾಗದ ಅಸಾಮಾನ್ಯ ಚಟುವಟಿಕೆಗಳು. ಹುಟ್ಟಿನ ಅರಮನೆ ಸೆರೆಮನೆಯಾಗಿರುತ್ತಾ, ವ್ಯಕ್ತಿ ತನ್ನ ಹುಟ್ಟುಸ್ಥಳ, ಪೋಷಕರ ಸ್ಥಿತಿ, ಸನ್ನಿವೇಶಗಳಿಂದಲೇ ಶ್ರೇಷ್ಠನಾಗಬೇಕಿಲ್ಲ ಎಂಬುದನ್ನು ಸಾರಿದ ದೇವನವನು. ಎಂಜಲು ತಿಂದ, ಕಳಕೊಂಡವರಿಗೆ ಮತ್ತೆ ತಂದುಕೊಟ್ಟ, ಮೂಕ ಪ್ರಾಣಿಗಳಿಗೆ ಪ್ರೀತಿಕೊಟ್ಟು ಅಭಯತೋರಿದ.

ಸಮಾಜದಲ್ಲಿ ಅಸಹಜ ಹಿಂಸೆ, ಅನ್ಯಾಯ ಮಾಡಿದವರನ್ನು ಮಮಕಾರ ಬಿಟ್ಟು ಮದಿಸಿದ, ಮರ್ದಿಸಿದ. ಮೃಗತ್ವವನ್ನು ಆಟಿಕೆಗಳನ್ನಾಗಿಸಿ, ಅವುಗಳ ಮೃದುತ್ವಕ್ಕೆ ಮೋಕ್ಷ ಕರುಣಿಸಿದ. ಮಥಿಸಿ ಬಂದ ಬೆಣ್ಣೆ ಉಂಡು ಕರ್ಮ ಫಲಕ್ಕೆ ಮೂಜಗವ ತೋರಿ, ತಾಯ್ತನದ ಪ್ರೀತಿಗೆ ಬೆಲೆ ಕೊಟ್ಟ. ಮುಗ್ದ ಮನಸುಗಳನ್ನು ಬಾಹ್ಯ ಮತ್ತು ಆಂತರಿಕ ಸೆರೆಯಿಂದ ಮುಕ್ತನನ್ನಾಗಿಸಿ, ತನ್ನವರಲ್ಲದೆ ನೆರೆಹೊರೆಯವರು ತನ್ನವರೇ ಎನ್ನುತ್ತಾ ಅವರ ಮನೆಹೊಕ್ಕ ತನ್ನ ಜೊತೆ ಬೀದಿಗಿಳಿಸಿ ಸಂಘಟನೆ ತೋರಿದ. ತರುಲತೆಗಳಿಗೂ ಮೌನ ಮಾತಿದೆ, ನೋವು ನಲಿವುಗಳಿದೆ ಎಂಬ ಭಾವಕ್ಕೆ ಮಣೆ ಕೊಟ್ಟು ಬಿದಿರ ತುಂಡಿನ ನೋವ ಮಾತಿಗೆ ಬೆಲೆ ತೆತ್ತು ತನ್ನ ಜೊತೆಯೇ ಇರಿಸಿ ಗಾನ ಹೊರಡಿಸಿದ. ಮೂಕ ಪ್ರಾಣಿಗೆ ಮೋಕ್ಷವನುಣಿಸಿ ಅದರ ನೆನಪಿಸಲು ಬೆನ್ನ ಮೂಳೆಯೇ ತನ್ನ ಪಾಂಚಜನ್ಯವಾಗಿಸಿದ.

ತನ್ನನ್ನು ಮತ್ತೂ ಅರ್ಥ ಮಾಡಿಕೊಳ್ಳದ ಮಹನೀಯರಿಗೆ ದ್ರೌಪದಿಯ ಸ್ವಯಂವರವನ್ನು ತನ್ನನ್ನು ತಾನು ಪ್ರಕಟಗೊಳಿಸಲು ಉಪಯೋಗಿಸಿದ. ಸಾಥ್ವಿಕತೆ ಮೈಗೂಡಿಸಿಕೊಂಡರೂ, ಪರಮ ಭಕ್ತನಾಗಿದ್ದರೂ, ಶ್ರೇಷ್ಠ ಗುರುವಾದರೂ ನ್ಯಾಯ ಒದಗಿಸಲಾರದ ಎಲ್ಲರೀಗೂ ಸರಿಪಡಿಸುವ ವಿಫುಲ ಅವಕಾಶ ನೀಡಿ ಅಸಾಧ್ಯತೆಯ ಕ್ಷಣಕ್ಕೆ ಮರಣದಂಡನೆಯಂತಹ ಶಿಕ್ಷೆ ಕೊಡಿಸಿದ. ಸಂಗ್ರಾಮಕ್ಕೆ ಮುನ್ನ ಸಂಧಾನ ಮಾಡಲೇಬೇಕಾದ ಮಹತ್ಕಾರ್ಯವೆಂಬುದನ್ನು ತಾನೇ ಮಾಡಿ ತೋರಿದ. ಮಾತೆಯ ಮುಗ್ಧ ರೋದನವನ್ನೂ ಸರಿಯಾಗಿ ಪರಾಮರ್ಶಿಸಿ ಸಮರ್ಪಣಾಭಾವ ಬಂದಾಗ ರಕ್ಷಣೆಯ ಅಕ್ಷಯವಾದ. ಎಲ್ಲಾ ವರ್ಗದ ವ್ಯಕ್ತಿತ್ವಗಳನ್ನು ಮೌನವಾಗಿ ದೃಷ್ಟಿಸಿ ನ್ಯಾಯ ಒದಗಿಸಿದ. ಮತ್ತೊಬ್ಬರ ಪ್ರೀತಿಸುವ, ಇನ್ನೊಬ್ಬರನ್ನು ಹೇತುವಾಗಿಸದ ಸ್ವಜನ ಪಕ್ಷಪಾತವಿಲ್ಲದ, ಎಲ್ಲವನ್ನೂ ಗೌರವಿಸುವ ನಾಯಕನಿಗೆ ಧರ್ಮದ ಪಟ್ಟ ಕಟ್ಟಿದ.

ಇಲ್ಲೆಲ್ಲೂ ಮಮಕಾರ, ದ್ರವ್ಯತೆಯ, ಸಂಪತ್ತಿನ, ಸಿರಿವಂತಿಕೆಗೆ ಮರುಳಾಗದೆ ಭ್ರಷ್ಟಾಚಾರಮುಕ್ತ ಜೀವನವೆಸಗಿದ. ಸಾರಿಹೇಳಿ , ತೋರಿ, ಬರೆದು ಹೀಗಿರಬೇಕೆಂದು ಬದುಕಿ ತೋರಿದ ಮಹಾತ್ಮನಿಗೂ ಕಾಲನ ಉರುಳಿಗೆ ಕೊರಳೊಡ್ಡಬೇಕೆಂದೂ, ಅದೂ ಒಂದು ಸಾಮಾನ್ಯ ವ್ಯಕ್ತಿಯಿಂದಲೂ ಸಾಗಿ ಬರಬಹುದು ಎಂಬ ಸಂದೇಶದೊಂದಿಗೆ ಕಾಲವಾದ ಆಕರ್ಷಣೆಯ ಹರಿಕಾರ ಶ್ರೀ ಕೃಷ್ಣ ಪರಮಾತ್ಮ ಸೌಂದರ್ಯದ ಖನಿ. ಅವನ ಬದುಕೊಂದು ಓದಿ ಮುಗಿಸಲಾರದ ಪುಸ್ತಕ, ನಾವು ಕಂಡಿರುವುದು ಅದರ ಮುಖಪುಟ.

ಮುಗ್ದ ಹಸುಳೆಯಿಂದ ಅಪ್ಪಟ ರಾಜಕಾರಣಿ, ಸಂತರು, ಸಾಮಾನ್ಯಅಸಾಮಾನ್ಯರು ಮಾದರಿಯಾಗಿ ಕಾಣಬೇಕಾದ ಪರಮಾತ್ಮ ಅಷ್ಟಮಿಯೊಂದಿನ ಅಲ್ಲ ಸದಾ ನೆನಪಿನಂಗಳದಲ್ಲಿರಲಿ. ಅವನ ಧೈರ್ಯದ ಪವಾಡ ನಡೆಯುತ್ತಿರಲಿ. ನಮಗೆಲ್ಲ ಶುಭವಿರಲಿ.


?️ರಾಧಾಕೃಷ್ಣ ಎರುಂಬು

- Advertisement -

Related news

error: Content is protected !!