ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಲಸಿಕೆ ತಯಾರಿಕಾ ಘಟಕಗಳಿಗೆ ತೆರಳಿ, ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿ ಹಾಗೂ ತಯಾರಿಕೆ ಬಗ್ಗೆ ಖುದ್ದು ಪರಿಶೀಲನೆ ನಡೆಸಲಿದ್ದಾರೆ. ಪುಣೆಯಲ್ಲಿರುವ ಫಾರ್ಮಾ ದೈತ್ಯ ಸೀರಮ್ ಇನ್ಸ್ಟಿಟ್ಯೂಟ್, ಅಹಮದಾಬಾದ್ನಲ್ಲಿರುವ ಝೈಡಸ್ ಕ್ಯಾಡಿಲಾ, ಹಾಗೂ ಹೈದರಾಬಾದ್ನಲ್ಲಿರುವ ಭಾರತ್ ಬಯೋಟೆಕ್ನ ಫಾರ್ಮಾ ಘಟಕಗಳಿಗೆ ಅವರು ಭೇಟಿ ನೀಡಲಿದ್ದಾರೆ.
ಝೈಡಸ್ ಕ್ಯಾಡಿಲಾ ಅಹಮದಾಬಾದ್ನ ಚಾಂಗೋದಾರ್ ಇಂಡಸ್ಟ್ರಿಯಲ್ ಏರಿಯಾದಲ್ಲಿದೆ. ತನ್ನ ಕೊರೊನಾ ಲಸಿಕೆ ZyCoV-Dಯ ಮೊದಲ ಹಂತದ ಪರೀಕ್ಷೆ ಮುಗಿದಿದ್ದು, ಆಗಸ್ಟ್ನಿಂದ ಎರಡನೇ ಹಂತದ ಕ್ಲೀನಿಕಲ್ ಟ್ರಯಲ್ ಶುರು ಮಾಡಿರುವುದಾಗಿ ಈ ಹಿಂದೆ ಸಂಸ್ಥೆ ತಿಳಿಸಿತ್ತು. ಇಂದು ಮೋದಿ ಗುಜರಾತ್ಗೆ ಭೇಟಿ ನೀಡ್ತಿದ್ದಾರೆ. ಇದೇ ಹೊತ್ತಲ್ಲಿ ಇಂದು ಬೆಳಗ್ಗೆ 9.30ಕ್ಕೆ ಝೈಡಸ್ ಕ್ಯಾಡಿಲಾದ ಘಟಕಕ್ಕೆ ಭೇಟಿ ಕೊಟ್ಟು, ಸಂಸ್ಥೆಯು ಲಸಿಕೆ ಅಭಿವೃದ್ಧಿಯಲ್ಲಿ ಎಷ್ಟು ಪ್ರಗತಿ ಕಂಡಿದೆ ಎಂಬ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಮಧ್ಯಾಹ್ನ 1:30ಕ್ಕೆ ಪುಣೆಯ ಸೀರಂ ಇನ್ಸ್ಟಿಟ್ಯೂಟ್ಗೆ ತೆರಳಿ ಅಲ್ಲಿ, ಕೋವಿಶೀಲ್ಡ್ ವ್ಯಾಕ್ಸಿನ್ ಬಗ್ಗೆ ವಿಜ್ಞಾನಿಗಳು ಹಾಗೂ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಲಿದ್ದಾರೆ.
ಪುಣೆಯಿಂದ ತೆಲಂಗಾಣದ ಭಾರತ್ ಬಯೋಟೆಕ್ಗೆ ತೆರಳಿರುವ ನಮೋ ಅಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿರುವ ಕೋವ್ಯಾಕ್ಸಿನ್ ಕುರಿತು ತಜ್ಞರಿಂದ ವಿವರಣೆ ಪಡೆಯಲಿದ್ದಾರೆ. ಲಸಿಕೆ ತಯಾರಿಕೆ, ಸವಾಲುಗಳು ಹಾಗೂ 130 ಕೋಟಿ ಭಾರತೀಯರಿಗೆ ಲಸಿಕೆ ವಿತರಣೆ ಮಾಡಲು ರೋಡ್ಮ್ಯಾಪ್ ಬಗ್ಗೆ ವಿಜ್ಞಾನಿಗಳು ಪ್ರಧಾನಿ ಮೋದಿಗೆ ವಿವರಣೆ ನೀಡಲಿದ್ದಾರೆ.