


ಮೈಸೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಸರ್ಕಾರ ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರು ಪ್ರಕರಣದ ಎಸ್ ಐ ಟಿ ತನಿಖೆಯಾಗಬೇಕೆಂದು ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರ ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿ ಹತ್ತುವರ್ಷಗಳ ನಂತರ ಬಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಎಸ್ ಐ ಟಿ ತನಿಖೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಪ್ರಕರಣದ ತನಿಖೆಯ ವಿಷಯದಲ್ಲಿ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ , ಕಾನೂನು ರೀತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಗೋಪಾಲ ಗೌಡರು ಎಸ್.ಐ.ಟಿ ರಚನೆ ಮಾಡುವಂತೆ ಹೇಳಿದ್ದಾರೆ. ನಾವು ಅವರ ಹೇಳಿಕೆಗೆ ಪರನೂ ಇಲ್ಲ, ವಿರೋಧನೂ ಇಲ್ಲ. ಕಾನೂನು ಪ್ರಕಾರ ಏನು ಮಾಡಬೇಕೊ ಅದನ್ನು ಮಾಡುತ್ತೇವೆ. ಅಗತ್ಯ ಬಿದ್ದರೆ ಎಸ್.ಐ.ಟಿ. ರಚನೆ ಮಾಡಲು ನಾವು ಸಿದ್ಧ ಎಂದು ಹೇಳಿದರು.
ಪೊಲೀಸರ ವರದಿಯ ಆಧಾರ ಮೇಲೆ ಏನು ಮಾಡಬೇಕು ನೋಡುತ್ತೇವೆ. ಇಂದು ಅಥವಾ ನಾಳೆ ವರದಿ ಕೊಡುವ ಸಾಧ್ಯತೆ ಇದೆ. ದೂರುದಾರ ಕಳೆದ ಹತ್ತು ವರ್ಷ ದಿಂದ ಕಣ್ಮರೆಯಾಗಿ, ಈಗ ಪೊಲೀಸರ ಮುಂದೆ ಬಂದು 164 ಸ್ಟೇಟ್ ಮೆಂಟ್ ಕೊಟ್ಟಿದ್ದಾನೆ. ಅವನು ಏನು ಹೇಳಬೇಕೊ ಹೇಳಿದ್ದಾನೆ. ಹೆಣ ಹೂತು ಹಾಕಿದ್ದೇನೆ ಹೆಣ ತೋರಿಸುವುದಾಗಿ ಹೇಳಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಧರ್ಮಸ್ಥಳ ವಿಚಾರದಲ್ಲಿ ದೂರುದಾರ ಹೇಳಿಕೆ ಕೊಟ್ಟಿದ್ದರೂ ಪೊಲೀಸರು ಸರಿಯಾಗಿ ಕ್ರಮ ಜರುಗಿಸುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾವು ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು, ಕಾನೂನು ಬಿಟ್ಟು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.








