Wednesday, September 23, 2026
spot_imgspot_img
spot_imgspot_img

ವಿಟ್ಲದಲ್ಲೊಬ್ಬರು ಅಪರೂಪದ ದಣಿವರಿಯದ ಮಹಿಳಾ ಪತ್ರಿಕಾ ವಿತರಕಿ..ಕೆ .ವಿ .ರಾಜಮ್ಮ

- Advertisement -
- Advertisement -

ಸರ್ವಮಂಗಳ.ಕೆ.ವಿಟ್ಲ.

ಇವರು ಕೆ. ವಿ. ರಾಜಮ್ಮ. ಅಪರೂಪದ ಮಹಿಳಾ ಸಾಧಕಿ. ವಿಟ್ಲದಲ್ಲಿ ನ್ಯೂಸ್ ಪೇಪರ್, ಪತ್ರಿಕೆಗಳ ಅಂಗಡಿ ಅಂದ ತಕ್ಷಣವೇ ನಮ್ಮ ನೆನಪಿನ ಅಂಗಳಕ್ಕೆ ನುಗ್ಗುವವರು ರಾಜಮ್ಮ. 1946ರಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಅಝೀಕ್ಕೋಡಿನಲ್ಲಿ ಜನಿಸಿದ ಇವರು ತಮ್ಮ ಶಿಕ್ಷಣವನ್ನು ಊರಿನಲ್ಲಿ ನಡೆಸಿದರು .ಹತ್ತನೇ ತರಗತಿಯ ಬಳಿಕ ಟೈಪ ರೈಟಿಂಗ್ ಕಲಿತರು. ಮಲಯಾಳಂ ಇವರ ಮಾತೃಭಾಷೆ .ಇವರು ಕನ್ನಡ ಟೈಪಿಂಗ್‌ನಲ್ಲಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಪಡೆದದ್ದು ಬಹಳ ಹೆಮ್ಮೆಯ ವಿಚಾರ ಅಲ್ಲದೆ ಹಿಂದೀ ಭಾಷೆಯಲ್ಲಿ ಎಂ.ಎ.ಪದವಿಯನ್ನು ಪಡೆದಿರುತ್ತಾರೆ. ಇವರ ತಂದೆ ಜ್ಯೋತಿಷಿ ,ತಾಯಿ ಗೃಹಿಣಿ, ಆರು ಹೆಣ್ಣು ಮಕ್ಕಳು ಎರಡು ಗಂಡು ಮಕ್ಕಳ ಜೊತೆ, ಹಿರಿಯ ಅಕ್ಕನ ಜವಾಬ್ದಾರಿ ಹೊತ್ತ ಇವರು ಕೂಡು ಕುಟುಂಬದಲ್ಲಿ ಬಾಳಿದವರು.

ವಿದ್ಯಾಭ್ಯಾಸದ ನಂತರ 1970ರಲ್ಲಿ ವಿಟ್ಲಕ್ಕೆ ಬಂದು, ಹಲವು ಹಿರಿಯರ ನೆರವಿನಿಂದ ಒಂದು ಟೈಪಿಂಗ್ ಸ್ಕೂಲನ್ನು ತೆರೆದರು. ನಂತರ ನೂರಾರು ಮಕ್ಕಳಿಗೆ ಕಲಿಸುವುದರ ಜೊತೆಗೆ ನೂರು ಶೇಕಡಾ ಫಲಿತಾಂಶವನ್ನು ಪಡೆದರು. ನಂತರದ ದಿನಗಳಲ್ಲಿ ಕಂಪ್ಯೂಟರ್ ಬಂದ ನಂತರ, ತಮ್ಮ ಸ್ಕೂಲ್ ಅನ್ನು ನಿಧಾನವಾಗಿ ತೆರವುಗೊಳಿಸಿದರು. ಹಲವಾರು ನ್ಯೂಸ್ ಏಜೆನ್ಸಿಗಳು, ಪತ್ರಿಕೆಗಳು ಇವರನ್ನು ಪತ್ರಿಕಾ ವಿತರಕರಾಗಿ ಕೆಲಸ ಮಾಡಲು ಒತ್ತಾಯಪಡಿಸಿದವು. ಆ ಮೇರೆಗೆ ಸಾವಿರದ ಒಂಬೈನೂರ ಎಪ್ಪತ್ತಾರರಲ್ಲಿ ವಿಟ್ಲದಲ್ಲಿ ಮಹಿಳಾ ಪತ್ರಿಕಾ ವಿತರಕರಾಗಿ ತಮ್ಮ ಕೆಲಸ ಆರಂಭಿಸಿದರು .ರಾಜಮ್ಮನವರ ತಮ್ಮ ಬಾಲಕೃಷ್ಣರವರು ಕೂಡ ಇವರ ಕೆಲಸಕ್ಕೆ ನೆರವಾದರು. ಅಂದಿನಿಂದ ಆರಂಭವಾದ ಈ ಕಾಯಕ ಇದುವರೆಗೂ ಯಾವುದೇ ವಿರಾಮವಿಲ್ಲದೆ ,ನಿರಂತರವಾಗಿ ನಡೆಯುತ್ತಿದೆ.

ಸುಮಾರು 78ರ ಹರೆಯದ ರಾಜಮ್ಮನವರು, ಇಂದಿಗೂ ಬಹಳ ಚುರುಕಾಗಿ ಕೆಲಸ ಮಾಡುವರು. ಮುಂಜಾವ ನಾಲ್ಕು ಗಂಟೆಗೆ ಕೆಲಸಕ್ಕೆ ಹಾಜರಾಗುವ ಇವರು ಸಂಜೆ ಸುಮಾರು ಏಳು ಗಂಟೆಗೆ ಮನೆಗೆ ತೆರಳುವರು .ತಮ್ಮ ದಿನನಿತ್ಯದ ಕೆಲಸದ ಜೊತೆಗೆ ಜ್ಯೋತಿಷ್ಯವನ್ನು ಕೂಡ ಹವ್ಯಾಸವನ್ನಾಗಿಸಿಕೊಂಡು, ಹಲವಾರು ಜನರಿಗೆ ಸಹಾಯ ನೀಡಿದ್ದಾರೆ. ಪತ್ರಿಕಾ ವಿತರಕರಾಗಿ ಅಪಾರ ಅನುಭವ ಪಡೆದ ಪರಿಶ್ರಮಿ ರಾಜಮ್ಮನವರ ಕಾರ್ಯ ಶ್ಲಾಘನೀಯವಾದದ್ದು.

ಕನ್ನಡ ,ತುಳು ,ತಮಿಳು ,ಮಲಯಾಳ ,ಇಂಗ್ಲಿಷ್ ಹೀಗೆ ಹಲವಾರು ಭಾಷೆಗಳ ಪುಸ್ತಕಗಳು ,ಪತ್ರಿಕೆಗಳು ,ಪರೀಕ್ಷೆಯ ಸಿದ್ಧತೆಗಾಗಿ ಕೈಪಿಡಿಗಳು, ಆರೋಗ್ಯ ,ಯೋಗ, ಜ್ಯೋತಿಷ್ಯ ಹತ್ತು ಹಲವು ಪುಸ್ತಕಗಳು ಇಲ್ಲಿ ಲಭ್ಯವಿದೆ. ಆಧುನಿಕತೆಯ ಕ ಬಂಧ ಬಾಹುಗಳಲ್ಲಿ ಇಂದು ನಮ್ಮ ವಿಶ್ವ ನಲಗುತ್ತಿದೆ,, ಇದರಿಂದ ಪತ್ರಿಕಾ ರಂಗಕ್ಕೆ ಖಂಡಿತವಾಗಿಯೂ ಸಮಸ್ಯೆ ಆಗಬಹುದು , ಮುಂದಿನ ದಿನಗಳಲ್ಲಿ ಪತ್ರಿಕೆ ಓದುವವರೇ ಇಲ್ಲವಾಗಬಹುದು ಎನ್ನುವ ಕಳವಳ ,ಕಹಿ ಸತ್ಯ ರಾಜಮ್ಮನವರ ಮಾತುಗಳಲ್ಲಿ ಅಡಗಿದೆ . ಓದುಗರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಪುಸ್ತಕವನ್ನು ಉಚಿತವಾಗಿ ಕೊಟ್ಟವರು ರಾಜಮ್ಮ..ಸದಾ ಮಂದಹಾಸ ಬೀರುತ್ತ ,ಕಾಯಕವೇ ಕೈಲಾಸ ಎಂಬಂತೆ ಜನಪ್ರಿಯ ರಾಗಿರುವ ರಾಜಮ್ಮನವರು ಇದೀಗ ತನ್ನ ಊರಿನತ್ತ ತೆರಳಿ ವಿಶ್ರಾಂತಿ ಪಡೆಯುವ ಯೋಜನೆಯಲ್ಲಿದ್ದಾರೆ. ಇವರ ಮುಂದಿನ ಬದುಕು ಆರೋಗ್ಯ ,ಸುಖ, ಸಂತೋಷದಿಂದ ತುಂಬಿರಲಿ ಎಂಬ ಪ್ರೀತಿಯ ಹಾರೈಕೆ ನಮ್ಮದು…

ಶ್ರೀಮತಿ ಸರ್ವಮಂಗಳ.ಕೆ.ವಿಟ್ಲ.
ಶಿಕ್ಷಕಿ, ವಿಠ್ಠಲ್ ಜೇಸೀಸ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ವಿಟ್ಲ.

- Advertisement -

Related news

error: Content is protected !!