




ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಗ ಚಾಕುವಿನಿಂದ ತಂದೆಗೆ ಇರಿದ ಘಟನೆ ನಡೆದಿದೆ.ಗಾಯಾಳು ಯಲ್ಲಪ್ಪ ಸಂಕುದ್ (72) ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದೆ.ಆರೋಪಿ ಮಗ ಮಹಾಂತೇಶ್ ಎಂದು ತಿಳಿದು ಬಂದಿದೆ.ಶುಕ್ರವಾರ ಮುಂಜಾನೆ ಯಲ್ಲಪ್ಪ ಮತ್ತು ಪುತ್ರ ಮಹಾಂತೇಶ್ ನಡುವೆ ಪಾತ್ರೆ ವಿಚಾರಕ್ಕೆ ಗಲಾಟೆಯಾಗಿದೆ. ಗಲಾಟೆ ತಾರಕಕ್ಕೆ ಏರಿದ್ದು, ಮಹಾಂತೇಶ್ ಚಾಕುವಿನಿಂದ ತಂದೆ ಯಲ್ಲಪ್ಪನಿಗೆ ನಾಲ್ಕು ಕಡೆ ಇರಿದಿದ್ದು, ಚಾಕು ದೇಹದಲ್ಲಿಯೇ ಸಿಲುಕಿತ್ತು.
ಚಾಕು ಸಮೇತ ಕುಟುಂಬಸ್ಥರು ಯಲ್ಲಪ್ಪರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಸದ್ಯ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಯಲ್ಲಪ್ಪ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಲ್ಲಪ್ಪ ಅವರ ಹೊಟ್ಟೆ, ಬೆನ್ನು, ಎದೆ ಸೇರಿದಂತೆ ನಾಲ್ಕು ಕಡೆ ಚಾಕುವಿನಿಂದ ಇರಿಯಲಾಗಿದೆ ಎಂದು ತಿಳಿದು ಬಂದಿದೆ.ಕಳೆದ ಹಲವು ದಿನಗಳಿಂದ ಹಣಕಾಸು ವಿಚಾರಕ್ಕೆ ತಂದೆ ಮತ್ತು ಮಕ್ಕಳ ನಡುವೆ ಗಲಾಟೆ ಆಗುತ್ತಿತ್ತು ಎಂದು ತಿಳಿದು ಬಂದಿದೆ.ಶುಕ್ರವಾರ ಮುಂಜಾನೆ ಯಲ್ಲಪ್ಪ ಇದ್ದ ಮನೆಗೆ ಬಂದಿದ್ದ ಮಹಾಂತೇಶ್, “ನನ್ನ ತಾಯಿ ತವರು ಮನೆಯಿಂದ ತಂದಿದ್ದ ಪಾತ್ರೆಯನ್ನು ಕೊಡುವಂತೆ ಕೇಳಿದ್ದಾನೆ. ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದ್ದು, ಜಗಳಕ್ಕೆ ತಿರುಗಿದೆ.ಗಲಾಟೆ ತಾರಕಕ್ಕೆ ಏರಿದ್ದು, ಮಹಾಂತೇಶ್ ಮನೆಯಿಂದ ತಗೆದುಕೊಂಡು ಬಂದಿದ್ದ ಚಾಕುವಿನಿಂದ ಯಲ್ಲಪ್ಪನಿಗೆ ನಾಲ್ಕು ಕಡೆ ಇರಿದಿದ್ದಾನೆ. ಬಿಡಿಸಲು ಹೋಗಿದ್ದ ಯಲ್ಲಪ್ಪನ ಹೆತ್ತವರ ಮೇಲೂ ಹಲ್ಲೆ ಮಾಡಿದ್ದಾನೆ.ಚಾಕು ಇರಿತ ಪ್ರಕರಣ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಹಾಂತೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.








