



ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡಿದ್ದು, ಕಳೆದ ಅನೇಕ ಸಮಯದಿಂದ ಸಂಪುಟಕ್ಕೆ ಸರ್ಜರಿ ಆಗಬೇಕು ಅಥವಾ ಆಗುತ್ತೆ ಅನ್ನುವ ವಿಚಾರಗಳು ಮುನ್ನೆಲೆಗೆ ಬರ್ತಿದ್ದವು. ಇದಕ್ಕೆ ಸಂಪುಟಕ್ಕೆ ಸರ್ಜರಿ ಆಗೋದು ಕನ್ಫರ್ಮ್ ಎಂದು ಹೇಳಲಾಗುತ್ತಿದೆ. ನವೆಂಬರ್ ತಿಂಗಳ ಅಂತ್ಯಕ್ಕೆ ಮೇಜರ್ ಸಂಪುಟ ಸರ್ಜರಿ ಆಗುವ ಸಾಧ್ಯತೆ ಇದ್ದು, 15 ಹಾಲಿ ಸಚಿವರಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಬಿಹಾರ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಪ್ಲ್ಯಾನ್ ಮಾಡಲಾಗಿದ್ದು, ಸಚಿವ ಸ್ಥಾನ ಸಿಗದೆ ಆಗಾಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಪ್ರಭಾವಿಗಳಿಗೂ ಸಹಿತ ಹೊಸ ಮುಖಗಳಿಗೂ ಮಣೆ ಹಾಕಲು ಕೈ ಪಾಳಯ ನಿರ್ಧರಿಸಿದೆ, ಇದರ ಜೊತೆಗೆ ಹಾಲಿ ಪ್ರಭಾವಿ ಸಚಿವರಿಗೂ ಕೊಕ್ ನೀಡಲು ನಿರ್ಧಾರ ಮಾಡಲಾಗಿದೆ. ಹೀಗಾಗಿ ಯಾರ್ಯಾರು ಸಂಪುಟಕ್ಕೆ ಸೇರಲಿದ್ದಾರೆ? ಯಾರ್ಯಾರಿಗೆ ಗೇಟ್ ಪಾಸ್ ಸಿಗಲಿದೆ? ಈ ಸಂಬಂಧ ರೇಸ್ನಲ್ಲಿ ಇರುವವರ ಪಟ್ಟಿ ಇಲ್ಲಿದೆ.
ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡುವುದರ ಜೊತೆಗೆ ಹಾಲಿ ಸಚಿವರನ್ನು ಕೈ ಬಿಡಲು ಕೆಲವೊಂದು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಆ ಪೈಕಿ, ಸರ್ಕಾರಕ್ಕೆ ಮುಜುಗರ ತರುವಂತಹ ಸಚಿವರು ಮತ್ತು ಭ್ರಷ್ಟಾಚಾರ ಆರೋಪ ಹೊತ್ತ ಸಚಿವರಿಗೆ ಕೊಕ್ ನೀಡಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಸಚಿವರ ಕಾರ್ಯವೈಖರಿಯ ಬಗ್ಗೆಯೂ ಮೌಲ್ಯಮಾಪನ ಮಾಡಿ ಹೆಸರಿಗಷ್ಟೇ ಸಚಿವ ಸ್ಥಾನ ಹೊತ್ತವರಿಗೆ ಗೇಟ್ಪಾಸ್ ನೀಡಲು ನಿರ್ಧರಿಸಲಾಗಿದೆ. ಮುಖ್ಯವಾಗಿ ವರಿಷ್ಠರಿಗೂ ಕೆಲ ಸಚಿವರ ವಿರುದ್ಧ ದೂರು ಹೋಗಿದ್ದು, ಶಾಸಕರ ಸಮಸ್ಯೆಗಳಿಗೆ ಸ್ಪಂದಿಸದ ಸಚಿವರ ಸ್ಥಾನವನ್ನು ವಾಪಸ್ ಪಡೆಯಲು ಚಿಂತನೆ ನಡೆಸಲಾಗಿದೆ. ಇದೆಲ್ಲವನ್ನು ಪರಿಶೀಲಿಸಿಕೊಂಡು ಹಾಲಿ ಸಚಿವ ಸಂಪುಟದಲ್ಲಿ ಶೇ. 60ರಷ್ಟು ಸಚಿವರನ್ನು ಬದಲಾವಣೆ ಮಾಡುವ ಸಾಧ್ಯತೆ ಇದ್ದು, 15ರಿಂದ 17 ಹೊಸ ಮುಖಗಳಿಗೆ ಅವಕಾಶ ನೀಡಲು ಯೋಚಿಸಲಾಗಿದೆ. ಆ ಪೈಕಿ ಕೆಲ ಪರಿಷತ್ ಸದಸ್ಯರಿಗೂ ಈ ಬಾರಿ ಸಚಿವ ಸ್ಥಾನ ಸಿಗಲಿದೆ ಎಂದು ತಿಳಿದು ಬಂದಿದೆ.
ಮಾಹಿತಿ ಪ್ರಕಾರ, ಅನೇಕ ಮಂದಿ ಸಚಿವ ಸ್ಥಾನದ ರೇಸ್ನಲ್ಲಿದ್ದು, ಆ ಪೈಕಿ ಮುಂಚೂಣಿಯಲ್ಲಿರುವ ಟಿ.ಬಿ.ಜಯಚಂದ್ರ (ಶಿರಾ), ಯು.ಟಿ.ಖಾದರ್ (ಉಳ್ಳಾಲ), ಆರ್.ವಿ.ದೇಶಪಾಂಡೆ (ಹಳಿಯಾಳ), ಬಿ.ಕೆ.ಹರಿಪ್ರಸಾದ್ (ಎಂಎಲ್ಸಿ), ರಾಘವೇಂದ್ರ ಹಿಟ್ನಾಳ್ (ಕೊಪ್ಪಳ), ನಾರಾಯಣಸ್ವಾಮಿ (ಬಂಗಾರಪೇಟೆ), ಅನಿಲ್ ಚಿಕ್ಕಮಾದು (ಹೆಚ್.ಡಿ ಕೋಟೆ), ರಘುಮೂರ್ತಿ (ಚಳ್ಳೆಕೆರೆ), ಶಿವಲಿಂಗೇಗೌಡ (ಅರಸೀಕೆರೆ), ಸುಬ್ಬಾರೆಡ್ಡಿ, ರೂಪಾ ಶಶಿಧರ್ (ಕೆಜಿಎಫ್), ಎಂ ಕೃಷ್ಣಪ್ಪ (ವಿಜಯನಗರ), ತನ್ವೀರ್ ಸೇಠ್ (ನರಸಿಂಹರಾಜ), ಯಶವಂತರಾಯ ಗೌಡ ಪಾಟೀಲ್ (ಇಂಡಿ), ಲಕ್ಷ್ಮಣ ಸವದಿ (ಅಥಣಿ) ಇಷ್ಟು ಮಂದಿ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ. ಇದರಲ್ಲಿ ಬಹುತೇಕ ಮಂದಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸರ್ಕಾರಕ್ಕೆ ಮುಜುಗರ ತಂದವರು, ನಾಮ್ಕಾವಸ್ಥೆಗೆ ಸಚಿವರಾಗಿರುವವರು, ಜವಾಬ್ದಾರಿ ಇದ್ದೂ ನಿರ್ವಹಿಸದೇ ಇರುವ ಸಚಿವರಿಗೆ ಕೊಕ್ ನೀಡಲು ನಿರ್ಧರಿಸಲಾಗಿದ್ದು, ಆ ಪೈಕಿ ರಹೀಂ ಖಾನ್ (ಪೌರಾಡಳಿತ), ಮಂಕಾಳ ವೈದ್ಯ (ಮೀನುಗಾರಿಕೆ, ಬಂದರು), ವೆಂಕಟೇಶ್ (ಪಶುಸಂಗೋಪನೆ, ರೇಷ್ಮೆ), ಆರ್.ಬಿ.ತಿಮ್ಮಾಪೂರ (ಅಬಕಾರಿ), ಡಿ.ಸುಧಾಕರ್ (ಯೋಜನೆ, ಸಾಂಖ್ಯಿಕ), ಹೆಚ್.ಕೆ.ಪಾಟೀಲ್ (ಕಾನೂನು, ಸಂಸದೀಯ), ಡಾ.ಹೆಚ್.ಸಿ.ಮಹಾದೇವಪ್ಪ (ಸಮಾಜ ಕಲ್ಯಾಣ), ದಿನೇಶ್ ಗುಂಡೂರಾವ್ (ಆರೋಗ್ಯ), ಭೈರತಿ ಸುರೇಶ್ (ನಗರಾಭಿವೃದ್ಧಿ), ಲಕ್ಷ್ಮಿ ಹೆಬ್ಬಾಳ್ಕರ್ (ಮಹಿಳಾ ಮತ್ತು ಮಕ್ಕಳ ಇಲಾಖೆ), ಕೆ.ಹೆಚ್.ಮುನಿಯಪ್ಪ (ಆಹಾರ ಇಲಾಖೆ), ಮಧು ಬಂಗಾರಪ್ಪ (ಶಿಕ್ಷಣ ಇಲಾಖೆ), ಬೋಸರಾಜ್ (ಸಣ್ಣ ನೀರಾವರಿ), ಡಾ. ಸುಧಾಕರ್ (ಉನ್ನತ ಶಿಕ್ಷಣ), ಚಲುವರಾಯಸ್ವಾಮಿ (ಕೃಷಿ ಇಲಾಖೆ), ಡಾ. ಶರಣಪ್ರಕಾಶ್ ಪಾಟೀಲ್ (ವೈದ್ಯಕೀಯ), ಶರಣಬಸಪ್ಪ ದರ್ಶನಾಪುರ (ಸಣ್ಣ ಕೈಗಾರಿಕೆ), ಶಿವಾನಂದ ಪಾಟೀಲ್ (ಕೈಮಗ್ಗ, ಜವಳಿ, ಸಕ್ಕರೆ), S.S ಮಲ್ಲಿಕಾರ್ಜುನ (ಗಣಿ & ಭೂ ವಿಜ್ಞಾನ) ಇಷ್ಟು ಮಂದಿಗೆ ಸಂಪುಟದಿಂದ ಗೇಟ್ಪಾಸ್ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇನ್ನು, ಹಾಲಿ ಸ್ಪೀಕರ್ ಯುಟಿ ಖಾದರ್ ಅವರು ಸಚಿವರಾದರಲ್ಲಿ ಸ್ಪೀಕರ್ ಸ್ಥಾನಕ್ಕೂ ಪೈಪೋಟಿ ಶುರುವಾಗಿದ್ದು, ಆ ಪೈಕಿ ಟಿ.ಬಿ ಜಯಚಂದ್ರ (ದೆಹಲಿ ಪ್ರತಿನಿಧಿ), ಹೆಚ್.ಕೆ ಪಾಟೀಲ್ (ಕಾನೂನು ಸಚಿವ), ದಿನೇಶ್ ಗುಂಡೂರಾವ್ (ಆರೋಗ್ಯ ಸಚಿವ) ಸ್ಪೀಕರ್ ರೇಸ್ನಲ್ಲಿದ್ದಾರೆ.
ಇನ್ನು ಸಚಿವ ಸ್ಥಾನ ನೀಡಿದರೆ ನಾವೂ ಒಂದು ಕೈ ನೋಡೇಬಿಡುತ್ತೇವೆ ಎಂದು ಕೆಲ ಶಾಸಕರು ಪ್ರಯತ್ನಿಸಿದ್ದು, ಆ ಪೈಕಿ, ಪುಟ್ಟರಂಗಶೆಟ್ಟಿ (ಚಾಮರಾಜನಗರ), ಬಿ.ಕೆ ಸಂಗಮೇಶ್ (ಭದ್ರಾವತಿ), ಬಿ.ಜಿ ಗೋವಿಂದಪ್ಪ (ಹೊಸದುರ್ಗ), ಎಸ್.ಸಿ ಬಾಲಕೃಷ್ಣ (ಮಾಗಡಿ), ಪಿ.ಎಂ ನರೇಂದ್ರಸ್ವಾಮಿ (ಮಳವಳ್ಳಿ), ಅಶೋಕ್ ಪಟ್ಟಣ (ರಾಮದುರ್ಗ), ಬಸವರಾಜ ರಾಯರೆಡ್ಡಿ (ಯಲಬುರ್ಗ), ಕೆ. ಷಡಕ್ಷರಿ (ತಿಪಟೂರು) ನಮಗೂ ಸಚಿವ ಸ್ಥಾನ ಕೊಟ್ಟರೆ ಕೊಡಲಿ, ನಾವೂ ರೇಸ್ನಲ್ಲಿ ಇದ್ದೇವೆ ಎಂದು ಹೈಕಮಾಂಡ್ ಗಮನ ಸೆಳೆಯೋಕೆ ಮುಂದಾಗಿದ್ದಾರೆ.








