



ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಭೀಕರವಾಗಿ ಕೊಲೆ ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ಘಟನೆ ನಡೆದಿದೆ.
ಕೊಲೆಯಾದ ಮಹಿಳೆ ತನು (25), ಕೊಲೆಗೈದ ಪತಿ ರಮೇಶ್ ಎಂದು ಗುರುತಿಸಲಾಗಿದೆ.
ಮನೆಯ ರೂಮಿನ ತುಂಬೆಲ್ಲ ರಕ್ತ ಚೆಲ್ಲಿದ್ದು, ರಕ್ತದ ಮಡುವಿನಲ್ಲಿ ಪತ್ನಿಯ ಶವ ಪತ್ತೆಯಾಗಿದೆ. ತನು & ರಮೇಶ್ 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ 6 ವರ್ಷದ ಗಂಡು ಮಗು ಇದೆ. ಗಂಡನೊಂದಿಗೆ ಜಗಳ ಮಾಡಿಕೊಂಡಿದ್ದ ತನು ಕಳೆದ 2 ವರ್ಷದಿಂದ ತೋಟದ ಮನೆಯಲ್ಲಿ ಪ್ರತ್ಯೇಕ ವಾಸವಿದ್ದಳು. ಹೀಗಾಗಿ ಇಬ್ಬರ ನಡುವೆ ಕಲಹ ಇತ್ತು. ಬುಧವಾರ ರಾತ್ರಿ ಕುಡಿದು ಬಂದಿದ್ದ ರಮೇಶ್, ಪತ್ನಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ.
ಪತ್ನಿಯನ್ನು ಕೊಂದ ಬಳಿಕ ತಾನೂ ಕೂಡ ಕೈ ಕೊಯ್ದುಕೊಂದು ಅಪಘಾತವಾಗಿದೆ ಎಂದು ಹೇಳಿದ್ದಾನೆ. ಆಸ್ಪತ್ರೆಯಲ್ಲಿ ಅಪಘಾತವಲ್ಲ ಎಂದು ಹೇಳಿದಾಗ ನನ್ನ ಮೇಲೆ ನನ್ನ ಪತ್ನಿಯಿಂದ ಕೊಲೆ ಯತ್ನ ನಡೆದಿದೆ ಎಂದು ಕಥೆ ಹೇಳಿದ್ದಾನೆ. ವಿಷಯ ಗೊತ್ತಾಗಿ ಮನೆಗೆ ಬಂದು ನೋಡಿದಾಗ ಕೊಲೆ ನಡೆದಿರುವುದು ಗೊತ್ತಾಗಿದೆ.
ತನುಜಾ ಪೋಷಕರು ಗಂಡ, ಅತ್ತೆ-ಮಾವ ಸೇರಿ ಒಂಬತ್ತು ಜನರ ವಿರುದ್ಧ ದೂರು ನೀಡಿದ್ದಾರೆ. ರಮೇಶ್ ಆತನ ಅಪ್ಪ-ಅಮ್ಮ, ಅಕ್ಕ-ತಂಗಿಯ ಮಾತು ಕೇಳಿ ಹಿಂದೆ ತನುಜಾಳಿಗೆ ಹಿಂಸೆ ಕೊಡುತ್ತಿದ್ದ. ಈಗ ಪ್ರಾಣವನ್ನೇ ತೆಗೆದಿದ್ದಾನೆ ಎಂದು ಆರೋಪಿಸಿದ್ದಾರೆ. ಅಜ್ಜಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು 9 ಜನರಲ್ಲಿ ಗಂಡ ರಮೇಶ್ ಹಾಗೂ ಆತನ ಅಪ್ಪ-ಅಮ್ಮನನ್ನ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.








