
ಮಂಗಳೂರು: ನಗರದ ವಿವಿಧ ಠಾಣೆಗಳಲ್ಲಿ ನಡೆದಿದ್ದ ಸರ ಕಸಿದುಕೊಳ್ಳುವುದು ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ನಗರ ಪೊಲೀಸರು ದೊಡ್ಡ ಯಶಸ್ಸು ಸಾಧಿಸಿದ್ದಾರೆ. ವಯೋವೃದ್ಧರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ನಡೆಸುತ್ತಿದ್ದ ಅಂತರ್ರಾಜ್ಯ ಕುಖ್ಯಾತ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ತಿರುವನಂತಪುರಂ ವಲಿಯರ್ತಲ ವೆಲ್ಲಟ್ಟಿ ವೀಡು ನಿವಾಸಿ ಆದಿತ್ ಗೋಪಾನ್ @ ಮುತ್ತು ಕೃಷ್ಣ (32) ಎಂದು ತಿಳಿದು ಬಂದಿದೆ.

ಈ ಪ್ರಕರಣದ ಆರೋಪಿ ಪತ್ತೆ ಬಗ್ಗೆ ವಿಶೇಷ ತಂಡವನ್ನು ರಚಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸರು, ಡಿ.4 ರಂದು ಕದ್ರಿ ಜೋಗಿ ಮಠದ ಬಳಿ ವಾಹನ ತಪಸಾಣೆ ನಡೆಸುತ್ತಿದ್ದ ಸಮಯ ಸಂಶಯಾಸ್ಪದವಾಗಿ ದ್ವಿಚಕ್ರ ವಾಹನ ಸಂಖ್ಯೆ KA19 HC6946 ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ನಿಲ್ಲಿಸಿ ಪರಿಶೀಲಿಸಿದಾಗ ವಾಹನವು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ ವಾಹನವಾಗಿದೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ವಿಚಾರಿಸಿದಾಗ ಕಳ್ಳತನ ಮಾಡಿದ ದ್ವಿ ಚಕ್ರ ವಾಹನವನ್ನು ಬಳಸಿಕೊಂಡು ವಯೋವೃದ್ದರು, ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳ್ಳತನ ಮಾಡಿರುವುದ ಬೆಳಕಿಗೆ ಬಂದಿದೆ. ಆರೋಪಿಯನ್ನು ಈ ದಿನ ಡಿ.5ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಮುಂದಿನ ತನಿಖೆಗಾಗಿ ಆರೋಪಿಯನ್ನು 3 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ನ.21/2025 ರಂದು ಕದ್ರಿ ಬಟ್ಟಗುಡ್ಡೆ ಬಳಿ ವಯೋವೃದ್ದ ಮಹಿಳೆಯ 1.5 ಪವನ್ ಸರವನ್ನು ಸುಲಿಗೆ ಮಾಡಿದ ಪ್ರಕರಣ, 27-09-2025 ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಕೋಟೆಕೇರಿ ಬಳಿ ಒಂಟಿ ಮಹಿಳೆಗೆ ಚೂರಿ ತೋರಿಸಿ ಬೆದರಿಸಿ 2 ಪವನ್ ಚಿನ್ನದ ಸರವನ್ನು ಸುಲಿಗೆ ಪ್ರಕರಣ, ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ದ್ವಿ ಚಕ್ರ ವಾಹನ ಕಳವು ಮಾಡಿದ ಪ್ರಕರಣ, ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ದ್ವಿ ಚಕ್ರ ವಾಹನ ಕಳವು ಮಾಡಿದ ಪ್ರಕರಣ, ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಬಳಿ ನಡೆಸಿದ ದ್ವಿ ಚಕ್ರ ವಾಹನ ಕಳವು ಪ್ರಕರಣ, ಸುರತ್ಕಲ್ ಠಾಣಾ ವ್ಯಾಪ್ತಿಯ ಅಗರಮೇಲು ಬಳಿ ನಡೆಸಿದ ದ್ವಿ ಚಕ್ರ ವಾಹನ ಕಳವು ಪ್ರಕರಣ ಹೀಗೆ ಹಲವು ಪ್ರಕರಣಗಳು ಈತನ ಮೇಲಿದೆ.
ಆರೋಪಿಯ ವಿರುದ್ಧ ತಮಿಳುನಾಡಿನ ನಾಗರಕೋಯಿಲ್ ಸೇರಿದಂತೆ ಹಲವು ಕಡೆ ಮನೆಗಳಿಗೆ ಹೊಂಚು ಹಾಕಿದ ಕಳವು ಪ್ರಕರಣಗಳು ದಾಖಲಾಗಿದ್ದು, ಜೈಲುವಾಸ ಅನುಭವಿಸಿ ಬಿಡುಗಡೆಯಾದ ನಂತರ ರೈಲು ಪ್ರಯಾಣದ ಮೂಲಕ ದೇಶದ ವಿವಿಧ ಕಡೆ ಸಂಚರಿಸಿ ದ್ವಿಚಕ್ರ ವಾಹನ ಕಳವು ಹಾಗೂ ಸರಗಳ್ಳತನ ಮಾಡುತ್ತಿದ್ದನೆಂಬುದು ಪತ್ತೆಯಾಗಿದೆ.
ಮಂಗಳೂರು ಪೂರ್ವ ಠಾಣೆಯ ನಿರೀಕ್ಷಕ ಅನಂತ ಪದ್ಮಾನಾಭ ಹಾಗೂ ಕದ್ರಿ ಠಾಣೆಯ ಸಿಬ್ಬಂದಿಗಳು ಈ ಬೃಹತ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
2025ರಲ್ಲಿ ನಗರ ವ್ಯಾಪ್ತಿಯಲ್ಲಿ ನಡೆದ 72 ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ 57 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ಶೇಕಡಾ 79ರಷ್ಟು ಸೊತ್ತು ಮರುಸ್ವಾಧೀನವಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.








