

ಪುತ್ತೂರು: ಪುತ್ತೂರು ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ನೌಕರರೊಬ್ಬರು ನೀಡಿದ ದೂರಿನ ಮೇರೆಗೆ, ಸಾರ್ವಜನಿಕ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕಟ್ಟೆ ನಿರ್ಮಿಸಿ ಧ್ವಜ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಪುತ್ತೂರು ತಾಲೂಕು ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್‌ನಲ್ಲಿ ಸಾರ್ವಜನಿಕ ರಸ್ತೆಗೆ ಹೊಂದಿಕೊಂಡಂತೆ 2017ರ ಸೆಪ್ಟೆಂಬರ್‌ನಲ್ಲಿ ಅನಧಿಕೃತವಾಗಿ ತ್ರಿಕೋನಾಕಾರದ ಕಟ್ಟೆ ನಿರ್ಮಿಸಲಾಗಿತ್ತು. ಆಗ ಈ ವಿಷಯಕ್ಕೆ ಸಂಬಂಧಿಸಿ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ಉಂಟಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು, ಕಟ್ಟೆಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರು.


ಆದರೆ ಕಟ್ಟೆಯನ್ನು ತೆರವುಗೊಳಿಸದೆ, ಇತ್ತೀಚೆಗೆ ಯಾರೋ ಆರೋಪಿತರು ಅದೇ ಅನಧಿಕೃತ ಕಟ್ಟೆಯಲ್ಲಿ ಮರದ ಕಂಬವನ್ನು ನೆಟ್ಟು, ಅದಕ್ಕೆ ಧಾರ್ಮಿಕ ಧ್ವಜವನ್ನು ಅಳವಡಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ದಿನಾಂಕ 16-12-2025ರಂದು ಸಾರ್ವಜನಿಕರಿಂದ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪಿರ್ಯಾದಿದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, 2017ರಲ್ಲಿ ವಿವಾದಕ್ಕೆ ಕಾರಣವಾಗಿದ್ದ ಸ್ಥಳದಲ್ಲಿಯೇ ಮತ್ತೆ ಅನಧಿಕೃತ ಚಟುವಟಿಕೆ ನಡೆದಿರುವುದು ದೃಢಪಟ್ಟಿದೆ.
ಈ ಅನಧಿಕೃತ ಕೃತ್ಯದಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿ, ದಿನಾಂಕ 17-12-2025ರಂದು ಅನಧಿಕೃತ ಕಟ್ಟೆಯನ್ನು ತೆರವುಗೊಳಿಸಲಾಗಿದೆ.
ಯಾವುದೇ ಅಧಿಕೃತ ಪರವಾನಗಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಕಟ್ಟೆ ನಿರ್ಮಿಸಿ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುವ ಸಂಭವ ಉಂಟುಮಾಡಿದ ಆರೋಪದ ಮೇರೆಗೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.ನಂ. 147/2025 ದಾಖಲಿಸಲಾಗಿದೆ. ಕಲಂ 270 ಬಿಎನ್‌ಎಸ್ 2023 ಹಾಗೂ ಕರ್ನಾಟಕ ಓಪನ್ ಪ್ಲೇಸ್ ಡಿಸ್ಫಿಗರ್‌ಮೆಂಟ್ ಆಕ್ಟ್ 1951 ಮತ್ತು 1981ರ ಕಲಂ 3ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇದೇ ವೇಳೆ, 2017ರಲ್ಲಿ ಚುನಾವಣಾ ಪೂರ್ವದಲ್ಲಿ ಈ ಅನಧಿಕೃತ ಕಟ್ಟೆ ನಿರ್ಮಾಣ ನಡೆದಿದ್ದು, ನಂತರ ಯಾವುದೇ ಹೆಚ್ಚುವರಿ ಚಟುವಟಿಕೆಗಳು ನಡೆದಿರಲಿಲ್ಲ. ಪ್ರಸ್ತುತ ರಾಜಕೀಯ ಉದ್ದೇಶಗಳಿಂದ ಈ ವಿಚಾರವನ್ನು ಮತ್ತೆ ಚುಟುವಟಿಕೆಗೆ ತರಲಾಗಿದೆ ಎಂಬ ಆರೋಪಗಳೂ ಕೇಳಿಬಂದಿದ್ದು, ಈ ಅಂಶಗಳ ಕುರಿತು ಕೂಡಾ ಪೊಲೀಸರು ತನಿಖೆ ನಡೆಸಲಿದ್ದಾರೆ.







