




ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಗ್ರಾಮಸ್ಥನೊಬ್ಬ ಅಜಾಗರೂಕತೆಯಿಂದ ಸಿಲುಕಿ ಮೂರು ತಾಸಿಗೂ ಹೆಚ್ಚು ಕಾಲ ಆತಂಕಕಾರಿ ಪರಿಸ್ಥಿತಿಯನ್ನು ಎದುರಿಸಿದ ಘಟನೆ ಸೋಮವಾರ ನಡೆದಿದೆ.
ಗಂಗವಾಡಿ ಗ್ರಾಮದ ಕಿಟ್ಟಿ ಎಂಬ ವ್ಯಕ್ತಿಯೇ ಈ ಅಪ್ರತೀಕ್ಷಿತ ಘಟನೆಯಲ್ಲಿ ಬೋನಿನೊಳಗೆ ಸಿಲುಕಿದವರು. ಕಳೆದ ಶನಿವಾರ ರಾತ್ರಿ ರಾಮಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ ಚಿರತೆ ದಾಳಿ ನಡೆಸಿ ಮೂರು ಜಾನುವಾರುಗಳನ್ನು ಕೊಂದು ಹಾಕಿದ ಹಿನ್ನೆಲೆಯಲ್ಲಿ, ಶಾಸಕ ಎ.ಆರ್. ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದರು. ಇದರಂತೆ ರವಿವಾರ ಗ್ರಾಮದಲ್ಲಿ ಎರಡು ಕಡೆ ಬೋನುಗಳನ್ನು ಸ್ಥಾಪಿಸಲಾಗಿತ್ತು.

ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಗೆ ಒಳಪಡುವ ಕಾಂಡಚಿನ ಗ್ರಾಮದ ಸಮೀಪ, ಗ್ರಾಮದಿಂದ ದೂರದಲ್ಲಿರುವ ರುದ್ರ ಎಂಬುವರ ಜಮೀನಿನಲ್ಲಿ ಇಟ್ಟಿದ್ದ ಬೋನನ್ನು ನೋಡಲು ಕುತೂಹಲದಿಂದ ಕಿಟ್ಟಿ ಸೋಮವಾರ ಬೆಳಿಗ್ಗೆ ಸುಮಾರು 10.30ರ ವೇಳೆಗೆ ಒಬ್ಬರೇ ತೆರಳಿದ್ದಾರೆ. ಬೋನಿನೊಳಗೆ ಪ್ರವೇಶಿಸಿದ ಕ್ಷಣದಲ್ಲೇ ಅದರ ಬಾಗಿಲು ಮುಚ್ಚಿಕೊಂಡಿದ್ದು, ಹೊರಬರಲು ಸಾಧ್ಯವಾಗದೆ ಅವರು ಒಳಗೇ ಸಿಲುಕಿಕೊಂಡಿದ್ದಾರೆ.
ಮೊಬೈಲ್ ಫೋನ್ ಇಲ್ಲದ ಕಾರಣ ಸಹಾಯಕ್ಕೆ ಕರೆ ಮಾಡಲು ಸಾಧ್ಯವಾಗದೆ, ‘ಕಾಪಾಡಿ’ ಎಂದು ಕೂಗುತ್ತಲೇ ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಚಿರತೆ ಭಯದಿಂದಾಗಿ ಆ ಭಾಗಕ್ಕೆ ಜನರ ಓಡಾಟ ಕಡಿಮೆಯಾಗಿದ್ದರಿಂದ ಅವರ ಕೂಗಾಟ ಯಾರಿಗೂ ಕೇಳಿಸಿಲ್ಲ.
ಮಧ್ಯಾಹ್ನ ಸುಮಾರು 2.30ರ ವೇಳೆಗೆ ಊಟಕ್ಕೆ ತೆರಳುತ್ತಿದ್ದ ಕೆಲ ರೈತರು ಹಾಗೂ ದನಗಾಹಿಗಳ ಗಮನಕ್ಕೆ ದೂರದಿಂದ ಬೋನಿನೊಳಗಿನ ವ್ಯಕ್ತಿ ಬಿದ್ದಿದ್ದು, ಅವರು ಹತ್ತಿರ ತೆರಳಿ ವಿಚಾರಿಸಿದಾಗ ಸತ್ಯ ತಿಳಿದುಬಂದಿದೆ. ತಕ್ಷಣವೇ ಜಮೀನಿನ ಮಾಲೀಕ ರುದ್ರಯ್ಯ ಹಾಗೂ ಇತರ ಗ್ರಾಮಸ್ಥರ ಸಹಕಾರದಿಂದ ಬೋನಿನ ಬಾಗಿಲು ತೆರೆಯಲಾಗಿದ್ದು, ಕಿಟ್ಟಿಯನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಲಾಗಿದೆ.
ಘಟನೆ ಗ್ರಾಮದಲ್ಲಿ ಕೆಲಕಾಲ ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆಯ ಎಚ್ಚರಿಕೆ ಕ್ರಮಗಳ ಬಗ್ಗೆ ಗ್ರಾಮಸ್ಥರಲ್ಲಿ ಚರ್ಚೆಗೆ ಕಾರಣವಾಗಿದೆ








