ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಾಬು ಕೆ. ವಿಟ್ಲ ಮಾಹಿತಿ
ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ(ರಿ.) ವಿಟ್ಲ ಘಟಕದ ಆತಿಥ್ಯದಲ್ಲಿ ಅ 6ರ ಮಂಗಳವಾರ ಜಿಲ್ಲಾ ವಾರ್ಷಿಕ ಮಿಲನೋತ್ಸವ-2026 ವಿಟ್ಲ ಬಸವನಗುಡಿ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಲಿದೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಬಾಬುಕೆ. ವಿಟ್ಲ ಹೇಳಿದರು.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪೂರ್ವಾಹ್ನ 9 ಗಂಟೆಯಿಂದ ಸಾಯಂಕಾಲ 6 ಗಂಟೆ ತನಕ ನಡೆಯುವ ಸಮಾರಂಭದಲ್ಲಿ ವಿವಿಧ ಕ್ರೀಡೆ, ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪೂರ್ವಾಹ್ನ 9 ಗಂಟೆಗೆ ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಬಂಗಾರು ಅರಸರು ಉದ್ಘಾಟಿಸಲಿದ್ದಾರೆ. ಬಾಬು ಕೆ. ವಿಟ್ಲ ಅಧ್ಯಕ್ಷತೆ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಅಶೋಕ್ ಕುಮಾರ್ ರೈ ಮತ್ತು ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್, ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಶ್ರೀಧರ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ. ಸಂಜೆ ಐದು ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಟ್ಲ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಮೊದಲಾದವರು ಪಾಲ್ಗೊಳ್ಳುವರು ಎಂದರು.
ಮಿಲನೋತ್ಸವ ದಲ್ಲಿ ಸುಮಾರು 2,000 ಜನರ ನಿರೀಕ್ಷೆ ಮಾಡಲಾಗಿದೆ. ಸಂಘದ ಸದಸ್ಯರಿಗಷ್ಟೇ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದೆ ಸಂಘವು ಎಲ್ಲಾ ತಾಲೂಕುಗಳಲ್ಲಿ ಘಟಕಗಳನ್ನು ಹೊಂದಿದೆ. ಜಿಲ್ಲಾ ಸಂಘವು ಎಂಟು ವರ್ಷಗಳನ್ನು ಪೂರೈಸಿದರೆ, ವಿಟ್ಲ ಘಟಕ ಹತ್ತು ವರ್ಷಗಳನ್ನು ಪೂರೈಸಿದೆ ಎಂದರು,
ಸಂಘವು ಸದಸ್ಯರ ಸಂಕಷ್ಟದ ಸಂದರ್ಭದಲ್ಲಿ ನೆರವಾಗಿದೆ, ಮುಂದಿನ ದಿನಗಳಲ್ಲಿ ಅಮ್ಟಾಡಿ ಬಾಂಬಿಲಸ್ವಂತ ನಿವೇಶನದಲ್ಲಿ ಕಟ್ಟಡ ನಿರ್ಮಾಣದ ಯೋಜನೆ ಹಾಕಿಕೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಘಟಕದ ಕೋಶಾಧಿಕಾರಿ ನಿಶಿತ್ ಪೂಜಾರಿ, ಹಿರಿಯ ಸದಸ್ಯ ಸಂಜೀವ ಪೂಜಾರಿ, ವಿಟ್ಲ ಘಟಕದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಂಕುಡೆ ಕಲ್ಕಾಜೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಶೆಟ್ಟಿ ಬರೆ ಮತ್ತಿತರರು ಉಪಸ್ಥಿತರಿದ್ದರು.








