




ಬೆಂಗಳೂರು: ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನವವಧು ಗಾನವಿ ಆತ್ಮಹತ್ಯೆ ಪ್ರಕರಣ ಇದೀಗ ಭಾರೀ ಕುಟುಂಬ ದುರಂತವಾಗಿ ಮಾರ್ಪಟ್ಟಿದೆ. ಗಾನವಿ ಸಾವಿನ ಬೆನ್ನಲ್ಲೇ ಪತಿ ಸೂರಜ್ ಮಹಾರಾಷ್ಟ್ರದ ನಾಗಪುರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಅಷ್ಟೇ ಅಲ್ಲದೆ, ಸೂರಜ್ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಸ್ತುತ ಅವರು ನಾಗಪುರದ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾನವಿ ಆತ್ಮಹತ್ಯೆ ಪ್ರಕರಣದ ಬಳಿಕ ಗಾನವಿ ಕುಟುಂಬಸ್ಥರು ಸೂರಜ್ ಮತ್ತು ಅವರ ಕುಟುಂಬದವರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಈ ಆರೋಪಗಳಿಂದ ಮಾನಸಿಕವಾಗಿ ಕುಗ್ಗಿಹೋದ ಸೂರಜ್, ತಮ್ಮ ತಾಯಿ ಜಯಂತಿ ಹಾಗೂ ಸಹೋದರ ಸಂಜಯ್ ಜೊತೆ ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿದ್ದರು. ಅಲ್ಲಿಯೇ ಏನಾಯಿತೋ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಸೂರಜ್ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಈ ಬೆಳವಣಿಗೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ತನಿಖೆ ಇದೀಗ ನಾಗಪುರಕ್ಕೂ ಸಂಪರ್ಕಗೊಂಡಿದೆ.
ಮಗನ ಆತ್ಮಹತ್ಯೆಯ ಶಾಕ್ ತಾಳಲಾರದೆ, ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಒಂದು ಕಡೆ ಗಾನವಿ ಮನೆಯಲ್ಲೂ ಸೂತಕದ ವಾತಾವರಣವಿದ್ದರೆ, ಇನ್ನೊಂದು ಕಡೆ ಸೂರಜ್ ಕುಟುಂಬದಲ್ಲೂ ಶೋಕ ಮಡುಗಟ್ಟಿದೆ.
ಒಂದೂವರೆ ತಿಂಗಳ ಮದುವೆ, ಭಾರೀ ರಿಸೆಪ್ಷನ್
ವಿದ್ಯಾರಣ್ಯಪುರದ ನಿವಾಸಿ ಸೂರಜ್ ಮತ್ತು ಗಾನವಿ ಅವರ ಮದುವೆ ಅಕ್ಟೋಬರ್ 29ರಂದು ನೆರವೇರಿತ್ತು. ನವೆಂಬರ್ 23ರಂದು ಅರಮನೆ ಮೈದಾನದಲ್ಲಿರುವ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದ ಭವ್ಯ ರಿಸೆಪ್ಷನ್ ಕೂಡ ನಡೆದಿತ್ತು. ಮದುವೆಯಾಗಿ ಒಂದೂವರೆ ತಿಂಗಳು ಕಳೆಯುವಷ್ಟರಲ್ಲಿ ಗಂಡ–ಹೆಂಡತಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಹನಿಮೂನ್ ಅರ್ಧಕ್ಕೆ ಮುಗಿಸಿ ವಾಪಸ್
ಮದುವೆಯ ಬಳಿಕ ದಂಪತಿ ಶ್ರೀಲಂಕಾಕ್ಕೆ ಹನಿಮೂನ್‌ಗೆ ತೆರಳಿದ್ದರು. 10 ದಿನಗಳ ಪ್ರವಾಸ ಯೋಜನೆ ಇದ್ದರೂ, ಐದು ದಿನಗಳಲ್ಲೇ ಅವರು ವಾಪಸ್ ಬಂದಿದ್ದರು ಎನ್ನಲಾಗಿದೆ. ಹನಿಮೂನ್ ವೇಳೆ ಏನಾಯಿತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ವಾಪಸ್ ಬಂದ ಬಳಿಕ ಭಾನುವಾರ ಗಾನವಿ ಬೆಂಗಳೂರಿಗೆ ಬಂದಿದ್ದು, ಸೋಮವಾರ ತವರು ಮನೆಗೆ ತೆರಳಿದ್ದರು. ಬುಧವಾರ ಮನೆಯಲ್ಲೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದು, ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟಿದ್ದಾರೆ.
ಗಾನವಿ ಆತ್ಮಹತ್ಯೆ ಸಂಬಂಧ ಈಗಾಗಲೇ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಪತಿ ಸೂರಜ್ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕೇಸ್ ಇನ್ನಷ್ಟು ಸಂಕೀರ್ಣವಾಗಿದೆ. ಬೆಂಗಳೂರು ಪೊಲೀಸರು ನಾಗಪುರ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲ ಆಯಾಮಗಳಿಂದ ತನಿಖೆ ಚುರುಕುಗೊಳಿಸಿದ್ದಾರೆ. ಈ ದಂಪತಿ ಸಾವಿನ ಹಿಂದಿನ ನಿಜವಾದ ಕಾರಣವೇನು ಎಂಬುದು ತನಿಖೆಯಿಂದಲೇ ತಿಳಿದುಬರಬೇಕಿದೆ.








