ಗ್ರಾಮ ಪಂಚಾಯತ್‌ನ ತಡೆಯಾಜ್ಞೆಯನ್ನು ನಿರ್ಲಕ್ಷಿಸಿ ರಾಜಾರೋಷವಾಗಿ ಸಾರ್ವಜನಿಕ ರಸ್ತೆಯಲ್ಲಿ ಎದ್ದು ನಿಂತ ಕಾಂಪೌಂಡ್..!




ವಿಟ್ಲ ಮುಡ್ನೂರು: ಸಾರ್ವಜನಿಕರ ವಿರೋಧದ ನಡುವೆಯು ರಸ್ತೆ ಬದಿಯಲ್ಲಿ ಕುಟುಂಬವೊಂದು ಅಕ್ರಮವಾಗಿ ತಡೆಗೋಡೆ ನಿರ್ಮಾಣ ಮಾಡಿರುವ ಘಟನೆ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಬೆಟ್ಟು ಬೂತ್ ಸಂಖ್ಯೆ 76 ರಲ್ಲಿ ನಡೆದಿದೆ.

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ 76 ರಲ್ಲಿ ಕಂಬಳಬೆಟ್ಟುವಿನಿಂದ ಮೂಡೈಮಾರ್, ಅಮೈ, ನೂಜಿ, ಸಂಪರ್ಕ ರಸ್ತೆಯ ಬದಿಯಲ್ಲಿ ಸರಕಾರಿ ಜಾಗದಲ್ಲಿ ಕಂಬಳಬೆಟ್ಟು ನಿವಾಸಿ ಮುಬೀನಾ ಬಾನು ಎಂಬವರು ಅಕ್ರಮವಾಗಿ ತಡೆಗೋಡೆಯನ್ನು ನಿರ್ಮಿಸಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆಯನ್ನು ಮುಂದಿಟ್ಟು, ಶೀಫ್ರವಾಗಿ ತೆರವು ಗೊಳಿಸುವಂತೆ ಜ. 14 ರಂದು ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರಿಗೆ ದೂರು ನೀಡಿದ್ದರು. ಸಾರ್ವಜನಿಕರ ದೂರಿಗೆ ಸ್ಪಂದಿಸಿದ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಈ ಜಾಗದಲ್ಲಿ ತಡೆಗೋಡೆ ನಿರ್ಮಿಸದಂತೆ ತಡೆಯಾಜ್ಞೆ ನೀಡಿದ್ದರು.

ಇವೆಲ್ಲದುದರ ನಡುವೆ ಏ.26 ರಂದು ಮುಬೀನಾ ಬಾನು ಮನೆಯವರು ರಾಜಾರೋಷವಾಗಿ ಈ ಜಾಗದಲ್ಲಿ ಅಕ್ರಮವಾಗಿ ತಡೆಗೋಡೆ ನಿರ್ಮಿಸಲು ಮುಂದಾಗಿದ್ದು, ಈ ವೇಳೆ ಸಾರ್ವಜನಿಕರು ತಡೆಯೊಡ್ಡಿದ್ದಾರೆ. ಕೂಡಲೇ ಸಾರ್ವಜನಿಕರು 112 ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು, ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಧಾವಿಸಿದ್ದಾರೆ. ಮತ್ತು ಪಂಚಾಯತ್‌ಗೂ ಕೂಡಲೇ ಸಾರ್ವಜನಿಕರು ಕರೆ ಮಾಡಿ ತಿಳಿಸಿರುತ್ತಾರೆ. ಆದರೆ ಯಾವ ಪೊಲೀಸರಿಗೂ, ಯಾವ ಕಾನೂನಿಗೂ ತಲೆಬಾಗದ ಮುಬೀನಾ ಬಾನು ಮನೆಯವರು ಸಾರ್ವಜನಿಕರ ಮೇಲೆ ಮುಗಿಬಿದ್ದು ರಾಜರೋಷವಾಗಿ ತಡೆಗೋಡೆಯನ್ನು ನಿರ್ಮಿಸಿರುತ್ತಾರೆ. ತಡೆಯಾಜ್ಞೆಯನ್ನು ನಿರ್ಲಕ್ಷಿಸಿ ಕಾನೂನು ಬಾಹಿರವಾಗಿ ನಿರ್ಮಾಣಗೊಂಡ ಅಕ್ರಮ ತಡೆಗೋಡೆಯನ್ನು ಕೂಡಲೇ ಸಂಬಂಧಪಟ್ಟ ಇಲಾಖೆಗಳು ತೆರವುಗೊಳಿಸಬೇಕು ಮತ್ತು ಕಾನೂನನ್ನು ನಿರ್ಲಕ್ಷಿಸಿದ ಮುಬೀನಾ ಬಾನು ಮನೆಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.








