



ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಟೋಲ್ ಹಣ ಪಾವತಿಸಲು ನಿರಾಕರಿಸಿದ ಲಾರಿ ಚಾಲಕ ಹಾಗೂ ಸಹಚರರು ಟೋಲ್ ಗೇಟ್‌ಗೆ ಹಾನಿ ಮಾಡಿದ್ದು, ಟೋಲ್ ಸಿಬ್ಬಂದಿಗಳ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಡಿಸೆಂಬರ್ 29ರ ಮುಂಜಾನೆ ನಡೆದಿದೆ.

ಈ ಕುರಿತು ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಹಾಗೂ ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಟೋಲ್ ಇನ್‌ಚಾರ್ಜ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಬಿ. (25) ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ದೂರಿನ ವಿವರದಂತೆ, ಕೆಎ.18.ಸಿ.3048 ಸಂಖ್ಯೆಯ ಟಾಟಾ ಲಾರಿ ರಸ್ತೆ ವಿರುದ್ದ ದಿಕ್ಕಿನಿಂದ ಚಲಿಸಿಕೊಂಡು ಬಂದು ಟೋಲ್ ಗೇಟ್ ಬಳಿ ನಿಂತಿದೆ. ಈ ವೇಳೆ ಟೋಲ್ ಸಿಬ್ಬಂದಿಗಳು ಟೋಲ್ ಹಣ ಪಾವತಿಸಲು ಸೂಚಿಸಿದಾಗ, ಲಾರಿ ಚಾಲಕ ಹಣ ನೀಡಲು ನಿರಾಕರಿಸಿ ವಾಹನವನ್ನು ಮುಂದಕ್ಕೆ ಚಲಾಯಿಸಿ ಟೋಲ್ ಗೇಟ್‌ಗೆ ಹಾನಿ ಉಂಟುಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅನಂತರ ಲಾರಿ ಚಾಲಕ ಹಾಗೂ ಲಾರಿಯಲ್ಲಿದ್ದ ಇನ್ನೊಬ್ಬ ವ್ಯಕ್ತಿ ಟೋಲ್ ಸಿಬ್ಬಂದಿಗಳಾದ ಅಂಕಿತ್ ಮತ್ತು ರೋಹಿತ್ ಅವರಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಬಳಿಕ ಇನ್ನೊಂದು ಪಿಕಪ್ ವಾಹನದಲ್ಲಿದ್ದ ಇಬ್ಬರನ್ನು ಕರೆದುಕೊಂಡು ಟೋಲ್ ಬೂತ್ ಒಳಗೆ ಅಕ್ರಮವಾಗಿ ಪ್ರವೇಶಿಸಿ, ಟೋಲ್ ಸಿಬ್ಬಂದಿಗಳ ಮೇಲೆ ಪುನಃ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 154/2025 ಅಡಿಯಲ್ಲಿ ಕಲಂ 329(3), 351(2), 352, 115(2), 118(1), 324(2) ಓದು ಸಹಿತ 3(5) ಬಿಎನ್‌ಎಸ್–2023 ಹಾಗೂ ಐಎಂವಿ ಕಾಯ್ದೆಯ ಕಲಂ 184(E) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.
ತನಿಖೆಯ ವೇಳೆ ಚಿಕ್ಕಮಗಳೂರು ಮೂಲದ ಆರೋಪಿಗಳಾದ ಲಾರಿ ಚಾಲಕ ಭರತ್ (23) ಹಾಗೂ ಲಾರಿಯಲ್ಲಿದ್ದ ಕ್ಲೀನರ್ ತೇಜಸ್ (26) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.








