


ದಾವಣಗೆರೆ: ಶಾಲೆಗೆ ಹೋಗಬೇಡ ಎಂದು ಮಗಳ ಪುಸ್ತಕಗಳನ್ನು ಸುಟ್ಟುಹಾಕಿದ ಘಟನೆ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಅರುಂಡಿ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಮಗಳು ತನ್ನ ತಂದೆಯ ವಿರುದ್ಧ ದೂರು ನೀಡಿದ್ದಾಳೆ.
10ನೇ ತರಗತಿ ಓದುತ್ತಿರುವ ಮಗಳು, ತಂದೆ ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡುವುದಲ್ಲದೆ ಶಾಲೆಗೆ ಕಳುಹಿಸುತ್ತಿಲ್ಲ ಎಂದು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ದೂರು ಸ್ವೀಕರಿಸಿದ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಮದ್ಯವ್ಯಸನಿ ತಂದೆಗೆ ತರಾಟೆ ತೆಗೆದುಕೊಂಡಿದ್ದಾರೆ.
112 ಸಿಬ್ಬಂದಿಗಳಾದ ಹೇಮರಾಜ್ ಮತ್ತು ರವಿಕುಮಾರ್ ತಂದೆಗೆ ಕಠಿಣ ಎಚ್ಚರಿಕೆ ನೀಡಿದ್ದು, ವಿದ್ಯಾರ್ಥಿನಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ ತಕ್ಷಣ ಅಗತ್ಯ ಪುಸ್ತಕಗಳು ಮತ್ತು ನೋಟು ಪುಸ್ತಕಗಳನ್ನು ಒದಗಿಸಿದ್ದಾರೆ.ನ್ಯಾಮತಿ ಪೊಲೀಸ್ ಠಾಣೆಯ ಪಿಐ ರವಿ ಅವರು ಹೆಚ್ಚಿನ ಸಹಾಯ ಮಾಡಿ, ಶಾಲಾ ಶಿಕ್ಷಕರಿಗೆ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ನ್ಯಾಮತಿ ಪೊಲೀಸ್ ಹಾಗೂ 112 ಪೊಲೀಸರ ಮಾನವೀಯ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.








