


ಒಡಿಶಾ: ತಲೆಯ ಹೇನು ಸಮಸ್ಯೆ ತೀವ್ರಗೊಂಡ ಪರಿಣಾಮ ಶಾಲಾ ಬಾಲಕಿಯೋರ್ವಳು ರಕ್ತ ವಾಂತಿ ಮಾಡಿ ಮೃತಪಟ್ಟ ಆಘಾತಕಾರಿ ಘಟನೆ ಒಡಿಶಾದ ಪುರಿ ಜಿಲ್ಲೆಯಲ್ಲಿ ನಡೆದಿದೆ. ಮೃತಳನ್ನು ಆರನೇ ತರಗತಿಯ ವಿದ್ಯಾರ್ಥಿನಿ ಲಕ್ಷ್ಮಿ ಪ್ರಿಯಾ ಸಾಹು ಎಂದು ಗುರುತಿಸಲಾಗಿದೆ.
ಲಕ್ಷ್ಮಿಗೆ ಬಹುಕಾಲದಿಂದ ತಲೆಯ ಹೇನು ಸಮಸ್ಯೆ ಇತ್ತು. ಆರಂಭದಲ್ಲಿ ಇದು ಸಾಮಾನ್ಯ ಸಮಸ್ಯೆ ಎಂದು ಕುಟುಂಬಸ್ಥರು ನಿರ್ಲಕ್ಷ್ಯಿಸಿದ್ದರು. ಹೇನು ನಿವಾರಣೆಗಾಗಿ ತಲೆ ಬೋಳಿಸಿಕೊಳ್ಳುವಂತೆ ತಾಯಿ ಸಲಹೆ ನೀಡಿದರೂ, ಬಾಲಕಿ ನಿರಾಕರಿಸಿದ್ದಳು. ಬಳಿಕ ಸೋಂಕು ಹೆಚ್ಚಾಗಿ ತಲೆಯಿಂದ ದುರ್ವಾಸನೆ ಬರುತ್ತಿದ್ದು, ಮುಜುಗರದಿಂದ ಅವಳು ಮನೆಯಿಂದ ಹೊರಗೆ ಹೋಗುವುದನ್ನೂ ಕಡಿಮೆ ಮಾಡಿದ್ದಳು.
ಮೂರು ದಿನಗಳ ಹಿಂದೆ ಆಕೆಯ ಆರೋಗ್ಯ ಏಕಾಏಕಿ ಹದಗೆಟ್ಟು ನಿರಂತರ ವಾಂತಿ ಆರಂಭವಾಗಿತ್ತು. ಬಳಿಕ ರಕ್ತ ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪುರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಆದರೆ ಸೋಂಕು ವ್ಯಾಪಕವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಳು.
ವೈದ್ಯರ ಪ್ರಕಾರ, ತಲೆಯ ಹೇನುಗಳಿಂದ ನೇರವಾಗಿ ಸಾವು ಸಂಭವಿಸುವುದು ಅಪರೂಪ. ಆದರೆ ದೀರ್ಘಕಾಲ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ಮಾಡಿದರೆ ರಕ್ತಹೀನತೆ ಉಂಟಾಗಿ ಜೀವಕ್ಕೆ ಅಪಾಯವಾಗಬಹುದು ಎಂಬ ಮಾಹಿತಿ ನೀಡಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








