Tuesday, July 21, 2026
spot_imgspot_img
spot_imgspot_img

ಸತ್ಯಾಂಶದ ವರದಿ ಮಾನನಷ್ಟವಾಗುವುದಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

- Advertisement -
- Advertisement -

ಪುತ್ತೂರು: ನ್ಯಾಯಾಲಯದ ಪ್ರಕ್ರಿಯೆಗಳ ಕುರಿತು ಸತ್ಯ ಹಾಗೂ ನಿಖರ ವರದಿ ಮಾಡುವ ಹಕ್ಕು ಮಾಧ್ಯಮಗಳಿಗೆ ಸಂವಿಧಾನಾತ್ಮಕವಾಗಿ ದೊರಕಿದ್ದು, ಅಂತಹ ವರದಿಯನ್ನು ಮಾನನಷ್ಟ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಂಗಳೂರಿನ ಜಯಕಿರಣ ಪತ್ರಿಕೆಯ ಮಾಲಕ ಪ್ರಕಾಶ್ ಪಾಂಡೇಶ್ವರ್ ಹಾಗೂ ನಮ್ಮ ಟಿ.ವಿ. ಮಾಲಕ ಡಾ. ಶಿವಶರಣ್ ಶೆಟ್ಟಿ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿದೆ.

ನ್ಯಾಯಾಲಯದ ನಡಾವಳಿ ಕುರಿತು ಸತ್ಯಾಧಾರಿತ ವರದಿ ಪ್ರಕಟಿಸುವುದು ಸಾರ್ವಜನಿಕರಿಗೆ ಮಾಹಿತಿ ನೀಡುವ ಮಾಧ್ಯಮಗಳ ಕರ್ತವ್ಯದ ಭಾಗವಾಗಿದ್ದು, ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಒಳಪಡೆಯುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಮತ್ತು ಹಲ್ಲೆ ದೂರಿಗೆ ಸಂಬಂಧಿಸಿ 2015ರಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಂಡ್ಯ ಮೂಲದ ಬಿ. ಮಂಜುನಾಥ್ ಎಂಬಾತನನ್ನು ಬಂಧಿಸಿದ್ದರು. ಈ ಬಂಧನ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಾಲಯದ ಮಾಧ್ಯಮ ವರದಿಯಿಂದ ಮಾನನಷ್ಟವಾಗಿದೆ ಎಂದು ಮಾಧ್ಯಮ ಸಂಸ್ಥೆಗಳ ಮಾಲೀಕರ ವಿರುದ್ಧ ಮಂಡ್ಯದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರೋಪಿ ಖಾಸಗಿ ದೂರು ದಾಖಲಿಸಿದ್ದ. ಈ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಮಾಧ್ಯಮ ಸಂಸ್ಥೆಗಳ ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಪ್ರಕರಣದಲ್ಲಿ ಆರೋಪಿ ಬಂಧನಕ್ಕೊಳಗಾಗಿರುವುದು ಮತ್ತು ಆತನ ಮೇಲೆ ಚಾರ್ಜ್‌ ಶೀಟ್ ಸಲ್ಲಿಕೆಯಾಗಿರುವುದು ಅಧಿಕೃತ ದಾಖಲೆಗಳಿಂದ ಸಾಬೀತಾಗಿದೆ. ಈ ಘಟನೆಯನ್ನು ವರದಿ ಮಾಡಿದ ಮಾಧ್ಯಮಗಳ ಮೇಲೆ ಮಾನನಷ್ಟ ಆರೋಪ ಹೊರಿಸುವುದು ತರ್ಕಬದ್ಧವಲ್ಲ ಎಂದು ತೀರ್ಪು ನೀಡಿದೆ

ಈ ಪ್ರಕರಣದಲ್ಲಿ ಸುದ್ದಿಗೆ ಜವಾಬ್ದಾರರಾದ ಸಂಪಾದಕರು ಅಥವಾ ವರದಿಗಾರರನ್ನು ಬಿಟ್ಟು ಮಾಧ್ಯಮ ಸಂಸ್ಥೆಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಿರುವುದು ಆರೋಪಿಯ ದುರುದ್ದೇಶ ತೋರಿಸುತ್ತದೆ. ಮೂಲ ದೂರುದಾರ ಪ್ರಕರಣದಿಂದ ಹಿಂದೆ ಸರಿಯುವಂತೆ ಮಾಡಲು ಮಾನನಷ್ಟ ಪ್ರಕರಣ ಹೂಡುವ ಮೂಲಕ ಒತ್ತಡದ ತಂತ್ರ ಬಳಸಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮಾಧ್ಯಮ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರಸ್ಥಂಭ. ಸತ್ಯ ಹಾಗೂ ಪ್ರಾಮಾಣಿಕ ವರದಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಒಳಗೆಯೇ ಇರುತ್ತದೆ ಮತ್ತು ಮಾನನಷ್ಟ ಮೊಕದ್ದಮೆ ವ್ಯಾಪ್ತಿಗೆ ಬರಲು ಸಾಧ್ಯವೇ ಇಲ್ಲ. ವ್ಯಾಪ್ತಿ ಮೀರಿ ದುರುದ್ದೇಶದಿಂದ ಕೂಡಿದ ಪ್ರಕರಣಗಳು ಹೈಕೋರ್ಟ್ನಲ್ಲಿ ರದ್ದಾಗುವುದು ನಿಶ್ಚಿತ ಎಂದು ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ತಿಳಿಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ

- Advertisement -

Related news

error: Content is protected !!