


ಬೆಳ್ತಂಗಡಿ: ಚಿನ್ನಾಭರಣವನ್ನು ಶುಚಿಗೊಳಿಸಿ ಹೊಳೆಯಿಸುವುದಾಗಿ ಹೇಳಿ ವೃದ್ಧೆಯೊಬ್ಬರ ಚಿನ್ನದ ಸರವನ್ನು ರಾಸಾಯನಿಕ ಬಳಸಿ ಕರಗಿಸಿ ವಂಚಿಸಿದ ಘಟನೆ ಕಾಶಿಪಟ್ಣ ಗ್ರಾಮದ ಪಣಿಲಾಜೆಯಲ್ಲಿ ನಡೆದಿದೆ.
ಪಣಿಲಾಜೆ ನಿವಾಸಿ ರುಕ್ಮಿಣಿ ಶೆಟ್ಟಿಗಾರ್( 90) ಅವರು ನೀಡಿದ ದೂರಿನ ಪ್ರಕಾರ, ಫೆಬ್ರವರಿ 10ರಂದು ಬೆಳಗ್ಗೆ ಸುಮಾರು 11.15ರ ವೇಳೆಗೆ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಅಪರಿಚಿತ ವ್ಯಕ್ತಿಯೋರ್ವ ಮನೆಗೆ ಬಂದು ಚಿನ್ನಾಭರಣ ತೊಳೆದು ಕೊಡುತ್ತೇನೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ಅವರು ಕಪಾಟಿನ ಲಾಕರ್ನಲ್ಲಿದ್ದ ಲಕ್ಷ್ಮೀ ಪದಕ ಹೊಂದಿದ ಸುಮಾರು ಎರಡು ಮುಕ್ಕಾಲು ಪವನ್ ಚಿನ್ನದ ಸರವನ್ನು ನೀಡಿದರು.ಆ ವ್ಯಕ್ತಿ ಅಂಗಳದಲ್ಲಿದ್ದ ನಳ್ಳಿಯಿಂದ ನೀರು ತೆಗೆದು ಬ್ರಶ್ನಿಂದ ತೊಳೆಯುವಂತೆ ನಾಟಕವಾಡಿ ಬಳಿಕ ಪೇಪರ್ನಲ್ಲಿ ಸುತ್ತಿ ಫ್ಯಾನ್ ಗಾಳಿಗೆ ಇಟ್ಟು ಒಣಗಿಸಲು ಹೇಳಿ ಅಲ್ಲಿಂದ ಪರಾರಿಯಾದನು. ನಂತರ ಪೇಪರ್ ತೆರೆದು ನೋಡಿದಾಗ ಅರಿಶಿನ ಪುಡಿಯಂತಿರುವ ಪುಡಿ, ಚಿನ್ನದ ಸರದ ಸಣ್ಣ ತುಂಡುಗಳು ಹಾಗೂ ತಾಮ್ರ ಬಣ್ಣಕ್ಕೆ ತಿರುಗಿದ ಲಕ್ಷ್ಮೀ ಪದಕ ಮಾತ್ರ ಕಂಡುಬಂದಿದೆ.
ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಚಿತ್ರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಯ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.








