



ಪುತ್ತೂರು: ಪಡ್ನೂರು ಗ್ರಾಮದಲ್ಲಿ ಹಿರಿಯ ನಾಗರೀಕರ ಮನೆ ಹಾಗೂ ಕೃಷಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅವ್ಯಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿ ಪುತ್ತೂರು ಸಹಾಯಕ ಪೋಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಲಾಗಿದೆ.72 ವರ್ಷ ಪ್ರಾಯದ ಸುಂದರಿ ಹಾಗೂ ಭವಾನಿ ( ಶಿವಪ್ಪ ಪೂಜಾರಿ ಪುತ್ರಿಯರು), ತೋಟ ಮನೆ, ಪಡ್ನೂರು ಗ್ರಾಮ ನಿವಾಸಿಗಳಾದ ಹಿರಿಯ ನಾಗರೀಕರು ಈ ಕುರಿತು ದೂರು ನೀಡಿದ್ದು, ಅವರು ಕಳೆದ ಸುಮಾರು 72 ವರ್ಷಗಳಿಂದ ಇದೇ ಸ್ಥಳದಲ್ಲಿ ವಾಸ್ತವ್ಯವಿದ್ದಾರೆ ಎಂದು ತಿಳಿಸಿದ್ದಾರೆ.
ದಿನಾಂಕ 04-02-2026ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯ ಅಂಗಳದಲ್ಲಿ ಅಡಿಕೆ ಒಣಗಿಸಲು ಜೆಸಿಬಿ ಮೂಲಕ ಸಮತಟ್ಟು ಮಾಡುವಾಗ, ನೆರೆಮನೆಯ ಯಾದವ ಶೆಟ್ಟಿಗಾರ್ ಸೇರಿದಂತೆ ಆರೋಪಿತರು ಅಕ್ರಮ ಪ್ರವೇಶ ಮಾಡಿ ಕೆಲಸಕ್ಕೆ ಅಡ್ಡಿಪಡಿಸಿ ಅವ್ಯಾಚ್ಯ ಶಬ್ದಗಳಿಂದ ಬೈದು, ಜಮೀನು ಲಪಟಾಯಿಸುವ ಉದ್ದೇಶದಿಂದ“ನಿಮ್ಮನ್ನು ಕೊಲ್ಲುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ಈ ಮೊದಲೇ ದೂರು ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮತ್ತೆ ದಿನಾಂಕ 10-02-2026ರಂದು ರಾತ್ರಿ 7 ಗಂಟೆ ಸುಮಾರಿಗೆ ಆರೋಪಿತರು ಕತ್ತಿ ಹಾಗೂ ದೊಣ್ಣೆ ಹಿಡಿದು ಕೃಷಿ ತೋಟಕ್ಕೆ ನುಗ್ಗಿ ಅವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ತೋಟಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಕೃಷಿ ಸಂಪೂರ್ಣವಾಗಿ ನಾಶವಾಗಿದ್ದು, ಮನೆಗೂ ಹಾನಿಯಾಗಿದೆ. ಮನೆ ಮುರಿದು ಬೀಳುವ ಸ್ಥಿತಿಯಲ್ಲಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪದೇ ಪದೇ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿರುವುದರಿಂದ ಜೀವನ ನಡೆಸಲು ಭಯವಾಗುತ್ತಿದೆ ಎಂದು ಹಿರಿಯ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಆರೋಪಿತರು ಪಡ್ನೂರು ಗ್ರಾಮದ ಲಕ್ಷಣ ಶೆಟ್ಟಿಗಾರ, ಯಾದವ ಶೆಟ್ಟಿಗಾರ್, ಲೋಕೇಶ ಶೆಟ್ಟಿಗಾರ. ಜಾನಕಿ, ರಶಿಕಾ ಹಾಗೂ ಕೂಸಪ್ಪ ಪೂಜಾರಿ ಸೇರಿದಂತೆ ಹಲವರು ಸೇರಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪುತ್ತೂರು ಸಹಾಯಕ ಪೋಲೀಸ್ ಅಧೀಕ್ಷಕರು ದೂರು ಸ್ವೀಕರಿಸಿ ತನಿಖೆ ನಡೆಸಲಾಗುತ್ತಿದ್ದು, ಹಿರಿಯ ನಾಗರಿಕರ ರಕ್ಷಣೆ ಹಾಗೂ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.








