


ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಜಯಪುರ ಸಮೀಪದ ಬಸರೀಕಟ್ಟೆ ಗ್ರಾಮದಲ್ಲಿ ತಾಯಿ ಬೈದರೆಂಬ ಕಾರಣಕ್ಕೆ ಮನನೊಂದ ಏಳನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಸುಪ್ರಿತಾ(13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಬಸರಿಕಟ್ಟೆ ಗ್ರಾಮದಲ್ಲಿ ಮೊಬೈಲ್ ಅಂಗಡಿಗೆ ಕೆಲಸಕ್ಕೆ ಹೋಗಿದ್ದ ತಾಯಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದ ವೇಳೆ ಸುಪ್ರಿತಾ ಟಿವಿ ನೋಡುತ್ತಿದ್ದಳು. ತಾಯಿ ಊಟ ಹಾಕಿ ಕೊಟ್ಟಾಗ ಸುಪ್ರಿತಾ ಟಿವಿ ನೋಡುತ್ತಾ ತಟ್ಟೆ ಬೀಳಿಸಿ, ಅನ್ನವನ್ನು ಚೆಲ್ಲಿದ್ದಳು. ಅದಕ್ಕೆ ತಾಯಿ, ಬರೀ ಟಿವಿ ನೋಡು ಓದಬೇಡ, ಚೆಲ್ಲಿರುವ ಅನ್ನವನ್ನು ಕ್ಲೀನ್ ಮಾಡು ಎಂದು ಹೇಳಿ ಮತ್ತೆ ಕೆಲಸಕ್ಕೆ ಹೋಗಿದ್ದರು. ತಾಯಿ ಕೆಲಸಕ್ಕೆ ಹೋದ ಬೆನ್ನಲ್ಲೇ ಬಾಲಕಿ ಸುಪ್ರಿತಾ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ವಿಷಯ ತಿಳಿದು ಮನೆಗೆ ಬಂದ ತಾಯಿ ಕೂಡಲೇ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ದರೂ ಬಾಲಕಿ ಸಾವನ್ನಪ್ಪಿದ್ದಾಳೆ. ಸುಪ್ರೀತಾಳ ತಾಯಿ ಸರೋಜ ಗಂಡನಿಂದ ಬೇರೆಯಾಗಿ ಬೇರೆ ವಾಸವಿದ್ದಳು. ಹಿರಿಯ ಮಗಳು ತಾಯಿ ಜೊತೆ ಇದ್ದರೆ, ಕಿರಿಯ ಮಗಳು ತಂದೆ ಜೊತೆ ಇದ್ದಳು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








