ಕೇರಳದಲ್ಲಿ ಪಟಾಕಿ ಸಿಡಿಸಿ ಹರ್ಷಾಚರಣೆ- ಭಾರಿ ವೈರಲ್ ಆದ ವಿಡಿಯೋ



ಪುತ್ತೂರು, ಫೆ.20: ಪುತ್ತೂರು ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ ಅಂತರಾಜ್ಯ ಮಾದಕ ವಸ್ತು ಸಾಗಾಟದ ಪ್ರಮುಖ ಆರೋಪಿ ಬಂಧಿತನಾದ ಬೆನ್ನಲ್ಲೇ, ಆರೋಪಿಯ ಮೂಲ ಊರಾದ ಕೇರಳ ರಾಜ್ಯದ ಕೋಝಿಕೋಡ್ನಲ್ಲಿ ಪಟಾಕಿ ಸಿಡಿಸಿ ಹರ್ಷಾಚರಣೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹೀಂದ್ರ ಥಾರ್ ಕಾರಿನಲ್ಲಿ ನಿಷೇಧಿತ ಎಂಡಿಎಮ್ (MDMA) ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿಯ ಮೇರೆಗೆ ಪುತ್ತೂರು ಪೊಲೀಸರು ಒಳಮೊಗ್ರು ಗ್ರಾಮದ ಪರ್ಪುಂಜ ಭಾಗದಲ್ಲಿ ವಾಹನ ತಪಾಸಣೆ ನಡೆಸಿದ್ದರು. ಈ ವೇಳೆ ಪುತ್ತೂರು ಕಡೆಯಿಂದ ಬರುತ್ತಿದ್ದ ಕೆ.ಎಲ್. ನೋಂದಣಿಯ ಕಪ್ಪು ಬಣ್ಣದ ಮಹೀಂದ್ರ ಥಾರ್ ಕಾರನ್ನು ತಪಾಸಣೆ ಮಾಡಿದಾಗ, ವಾಹನದಲ್ಲಿದ್ದ ಮೂವರು ಆರೋಪಿಗಳ ಪೈಕಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಹಮ್ಮದ್ ಅಜ್ಮಲ್ ಸಿ ಅಲಿಯಾಸ್ ಅಜ್ಜು (ಕೋಝಿಕೋಡ್ ಮೂಲ) ಪತ್ತೆಯಾಗಿದ್ದು, ತಕ್ಷಣ ಬಂಧಿಸಲಾಗಿದೆ.
ಬಂಧಿತ ಮಹಮ್ಮದ್ ಅಜ್ಮಲ್ ಕೇರಳ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದನೆಂದು ತಿಳಿದುಬಂದಿದೆ. ಈತನ ವಿರುದ್ಧ ಕೇರಳ ರಾಜ್ಯದ ಕೋಝಿಕೋಡ್, ಕಣ್ಣೂರು ಹಾಗೂ ವಯನಾಡ್ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕೇರಳ ಪೊಲೀಸರು ಕೂಡಾ ಈತನ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರು.
ಆರೋಪಿಯ ಬಂಧನದ ಸುದ್ದಿ ಕೇರಳದಲ್ಲಿ ಹರಡುತ್ತಿದ್ದಂತೆ, ಆತನ ಊರಿನಲ್ಲಿ ಕೆಲವರು ಪಟಾಕಿ ಸಿಡಿಸಿ, ತಂಪು ಪಾನೀಯ ವಿತರಿಸಿ ಹರ್ಷಾಚರಣೆ ನಡೆಸಿದ ದೃಶ್ಯಗಳು ವಿಡಿಯೋ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆರೋಪಿಯ ಬಂಧನದಿಂದ ಮಾದಕ ಜಾಲಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಪುತ್ತೂರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.








