ಬೆಂಗಳೂರು: ರಾಜ್ಯದಲ್ಲಿ ಸ್ವಯಂ ಚಾಲಿತ ಮ್ಯುಟೇಶನ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, 8 ದಿನದಲ್ಲಿಯೇ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಆಟೋ ಮ್ಯುಟೇಶನ್ ತಂತ್ರಾಂಶಕ್ಕೆ ಚಾಲನೆ ನೀಡಿದ ಅವರು, ಆನ್‌ಲೈನ್ ಮೂಲಕ ಖಾತೆ ಬದಲಾವಣೆಗೆ ಮನವಿ ಸಲ್ಲಿಸಿದರೆ 7 ದಿನ ನೊಟೀಸ್ ಅವಧಿ ಇರುತ್ತದೆ. ಈ ಅವಧಿಯಲ್ಲಿ ಯಾರು ಬೇಕಾದರೂ ಭೂಮಿ ತಂತ್ರಾಂಶದ ಮೂಲಕ ತಕರಾರು ಸಲ್ಲಿಸಬಹುದು. ಯಾರೂ ತಕರಾರು ಸಲ್ಲಿಸದಿದ್ದರೆ ಎಂಟನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ. ನೋಂದಣಿಯೇತರವಾಗಿ ಖಾತೆ ಬದಲಾವಣೆಗೆ ಮನವಿ ಬಂದಂತಹ ಪ್ರಕರಣಗಳಿಗೆ 15 ದಿನ ನೊಟೀಸ್ ಅವಧಿ ಇದ್ದು, ತಕರಾರು ಸಲ್ಲಿಸಬಹುದಾಗಿದೆ. ತಕರಾರು ಇಲ್ಲದಿದ್ದರೆ 16ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ ಎಂದು ತಿಳಿಸಿದರು.
2024ನೆ ಸಾಲಿನ ಎಪ್ರಿಲ್ 1 ರಿಂದ 2026 ಫೆ.20ರವರೆಗಿನ ಅವಧಿಯಲ್ಲಿ 35,11,987 ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತವಾಗಿ ಮಾಡಿದ್ದರೆ, ಕೇವಲ 5207 ಪ್ರಕರಣಗಳಲ್ಲಿ ಮಾತ್ರ ತಕರಾರು ದಾಖಲಾಗಿವೆ. ಅಂದರೆ ನಾವು ಒಟ್ಟು ಮ್ಯುಟೇಶನ್ ಶೇ.98 ರಷ್ಟು ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆ ಮಾಡಿದಂತಾಗಿದೆ. ತಕರಾರು ದಾಖಲಿಸಿದ ಪ್ರಕರಣಗಳನ್ನೂ 60 ದಿನಗಳಲ್ಲಿ ಇತ್ಯರ್ಥಗೊಳಿಸಿ ಆದೇಶ ಹೊರಡಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.ಸ್ವಯಂ ಚಾಲಿತ ಮ್ಯುಟೇಶನ್‌ಗೆ ಚಾಲನೆ ನೀಡುವ ಮೂಲಕ ಜನಪರ ಮತ್ತು ಸರಳ ಆಡಳಿತವನ್ನು ಸಾರ್ವಜನಿಕರ ಮನೆಬಾಗಿಲಿಗೇ ತಲುಪಿಸಬೇಕು ಎಂಬ ಸರಕಾರದ ಉದ್ದೇಶ ಈಡೇರಿದೆ ಎಂದ ಅವರು, ಕಂದಾಯ ಇಲಾಖೆಯನ್ನು ಜನಪರಗೊಳಿಸಬೇಕು, ಆಡಳಿತದಲ್ಲಿ ಸುಧಾರಣೆ ಮತ್ತು ಸರಳೀಕರಣಗೊಳಿಸಬೇಕು ಎಂಬ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷದಿಂದ ಹೆಜ್ಜೆ ಹೆಜ್ಜೆಗೂ ಹಲವಾರು ಬದಲಾವಣೆಗಳನ್ನು ತರಲಾಗುತ್ತಿದೆ. ಆ ಬದಲಾವಣಾ ಪರ್ವದ ಮತ್ತೊಂದು ಮಹತ್ವದ ಹೆಜ್ಜೆಯೇ ಸ್ವಯಂ ಚಾಲಿತ ಮ್ಯುಟೇಶನ್‌ಗೆ ಚಾಲನೆ ಎಂದು ಸಚಿವರು ಉಲ್ಲೇಖಿಸಿದರು.
ಈ ಸೇವೆಯನ್ನು ಒಂದು ತಿಂಗಳಿನಿಂದ ಮಂಡ್ಯದಲ್ಲಿ ಅನುಷ್ಠಾನಗೊಳಿಸಿ ಸಾಧಕ ಪರಿಶೀಲಿಸಿ ಇಂದಿನಿಂದ ಶೇ.98 ರಷ್ಟು ಎಲ್ಲಾ ಖಾತೆ ಬದಲಾವಣೆಗಳೂ ಸ್ವಯಂ ಚಾಲಿತಗೊಳ್ಳಲು ಮುನ್ನುಡಿ ಇಟ್ಟಿದ್ದೇವೆ. ಅಲ್ಲದೆ, ಖಾತೆ ಬದಲಾವಣೆ ಕಂದಾಯ ಇಲಾಖೆಯ ಮೂಲ ಜವಾಬ್ದಾರಿಗಳಲ್ಲೊಂದು. ಇನ್ನೂ ಜನ ಸಾಮಾನ್ಯರು ಖಾತೆ ಬದಲಾವಣೆಗಾಗಿ ಸರಕಾರಿ ಕಚೇರಿಗೆ ಅಲೆಯುವಂತಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಆನ್‌ಲೈನ್‌ನಲ್ಲಿಯೇ ತಮ್ಮ ಖಾತೆ ಬದಲಾವಣೆ ಕೆಲಸಗಳನ್ನು ನಿರ್ವಹಿಸಬಹುದು ಎಂದು ಅವರು ವಿವರಿಸಿದರು.
ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವ್ಯಾವ ಸೇವೆಗಳಿಗೆ ನೊಟೀಸ್ ನೀಡುವ ಅಗತ್ಯ ಇರುವುದಿಲ್ಲವೋ ಅವುಗಳನ್ನು 2024ರ ಎಪ್ರಿಲ್ ತಿಂಗಳಿನಿಂದಲೇ ಸ್ವಯಂ ಚಾಲಿತವಾಗಿ ವರ್ಗಾವಣೆಯಾಗುವಂತೆ ಮಾಡಲಾಗಿತ್ತು. ಹಕ್ಕು-ಬಾಧ್ಯತೆ ದಾಖಲಾತಿ, ಋಣ ತೆಗೆಯುವುದು, ಭೂ ಪರಿವರ್ತನೆ, ಪೋಡಿ, ಭೂಸ್ವಾಧೀನ, ನ್ಯಾಯಾಲಯ ಆದೇಶ, ನ್ಯಾಯಾಲಯ ತಡೆಯಾಜ್ಞೆ, ಸರಕಾರದ ಆದೇಶ, ಸಾಗುವಳಿ ಚೀಟಿ ನಮೂದು, ಪಹಣಿ ವರ್ಗಾವಣೆ ಸೇವೆಗಳನ್ನು ಈಗಾಗಲೇ ಸ್ವಯಂ ಚಾಲಿತಗೊಳಿಸಲಾಗಿತ್ತು. ಇಂತಹ ಪ್ರಕರಣಗಳು ತಿಂಗಳಿಗೆ ಸರಾಸರಿ 2.47 ಲಕ್ಷ ಖಾತೆ ಬದಲಾವಣೆಗಾಗಿ ಬರುತ್ತವೆ. ಈ ಪೈಕಿ 1.75 ಲಕ್ಷ ಖಾತೆ ಬದಲಾವಣೆಯನ್ನು ಈಗಾಗಲೇ ಸ್ವಯಂ ಚಾಲಿತವಾಗಿ ನೆರವೇರಿಸಲಾಗಿದೆ. ಅಂದರೆ ಶೇ.65 ರಿಂದ ಶೇ.71 ರಷ್ಟು ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಮೀನಾ ನಾಗರಾಜ್ ಸೇರಿದಂತೆ ಪ್ರಮುಖರಿದ್ದರು.’
‘ಶಾನುಭೋಗರ ಕೆಲಸ ಭೂಮಿ ತಂತ್ರಾಂಶ ಮಾಡುತ್ತಿದೆ:
‘ಈ ಹಿಂದೆ ಶಾನುಭೋಗರು ಮಾಡುತ್ತಿದ್ದ ಕೆಲಸವನ್ನು ಈಗ ಭೂಮಿ ತಂತ್ರಾಂಶದ ಮೂಲಕ ಮಾಡಲಾಗುತ್ತಿದೆ. ಆದರೆ, ಇದಕ್ಕಾಗಿ ಜನ ಸಾಮಾನ್ಯರು ದಿನನಿತ್ಯ ಸರಕಾರಿ ಕಚೇರಿಗಳಿಗೆ ಅಲೆಯುವುದು ಸಾಮಾನ್ಯವಾಗಿತ್ತು. ಕೆಲ ಅಧಿಕಾರಿಗಳ ಸ್ಟೇಚ್ಛಾಚಾರದಿಂದ, ಅವ್ಯವಸ್ಥೆ ಮತ್ತು ಮಧ್ಯವರ್ತಿಗಳ ಕಿರುಕುಳದಿಂದ ಸಾರ್ವಜನಿಕರು ಶೋಷಣೆಗೆ ಒಳಗಾಗುತ್ತಿದ್ದರು. ಇದರಿಂದ ಸರಕಾರಕ್ಕೂ ಕೆಟ್ಟ ಹೆಸರು ಉಂಟಾಗುತ್ತಿತ್ತು. ಪ್ರಸ್ತುತ ಸ್ವಯಂ ಚಾಲಿತ ಮ್ಯುಟೇಶನ್‌ಗೆ ಚಾಲನೆ ನೀಡಲಾಗಿದ್ದು, ಈ ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ನೀಡಿದಂತಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.








