


ಜೆರುಸಲೆಮ್: ಇಸ್ರೇಲ್ ನಲ್ಲಿ ವಾಸಿಸುತ್ತಿರುವ ಅಥವಾ ಪ್ರವಾಸದಲ್ಲಿರುವ ಅಮೆರಿಕ ನಾಗರಿಕರಿಗೆ ದೇಶದಿಂದ ಹೊರಡಲು ನೇರವಾಗಿ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಜೆರುಸಲೆಮ್ ನಲ್ಲಿರುವ ಅಮೇರಿಕದ ರಾಯಭಾರ ಕಚೇರಿ ತಿಳಿಸಿದೆ.

ಆನ್ಲೈನ್ ನಲ್ಲಿ ಪ್ರಕಟಿಸಿದ ಭದ್ರತಾ ಎಚ್ಚರಿಕೆಯಲ್ಲಿ, ಇಸ್ರೇಲ್ ನ ಪ್ರವಾಸೋದ್ಯಮ ಸಚಿವಾಲಯವು ಈಜಿಪ್ಟ್ ನ ಟಾಬಾ ಗಡಿ ದಾಟುವಿಕೆಗೆ ಕಾರ್ಯನಿರ್ವಹಿಸುತ್ತಿರುವ ಶಟಲ್ ಬಸ್ ಗಳ ಕುರಿತು ಮಾಹಿತಿಯನ್ನು ಒದಗಿಸುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
“ನೀವು ಹೊರಡುವ ಈ ಆಯ್ಕೆಯನ್ನು ಬಳಸಿಕೊಳ್ಳಲು ಆರಿಸಿಕೊಂಡರೆ, ಅಮೆರಿಕ ಸರ್ಕಾರವು ನಿಮ್ಮ ಸುರಕ್ಷತೆಯನ್ನು ಖಾತರಿಪಡಿಸುವುದಿಲ್ಲ. ಇಸ್ರೇಲ್ ನಿಂದ ಹೊರಡಲು ಬಯಸುವವರಿಗೆ ಸೌಜನ್ಯವಾಗಿ ಈ ಮಾಹಿತಿಯನ್ನು ನೀಡಲಾಗಿದೆ,” ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈಜಿಪ್ಟ್ ಗಡಿಗೆ ತೆರಳುವ ಬಸ್ ಗಳಲ್ಲಿ ಸೇರಲು ಬಯಸುವ ಅಮೆರಿಕ ನಾಗರಿಕರು, ಪ್ರವಾಸೋದ್ಯಮ ಸಚಿವಾಲಯದ ‘ಸ್ಥಳಾಂತರಿಸುವ ಫಾರ್ಮ್’ ಮೂಲಕ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ.
ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಕಟಣೆ ಹೊರಡಿಸಲಾಗಿದೆ.








