


ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೀನ್ಯಾಜೆ ಎಂಬಲ್ಲಿ ಮಾ.4ರಂದು ಸರ್ಕಾರಿ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.

ಧರ್ಮಸ್ಥಳ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸಮರ್ಥ ಆರ್. ಗಾಣಿಗೇರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹಿಂಸಾತ್ಮಕವಾಗಿ ಕೋಳಿ ಅಂಕ ನಡೆಯುತ್ತಿರುವುದು ಕಂಡುಬಂದಿದೆ. ದಾಳಿ ವೇಳೆ ಕೆಲವರು ಪರಾರಿಯಾಗಿದ್ದು, ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಹರಿಶ್ಚಂದ್ರ (32), ರಮೇಶ ಕುಲಾಲ್ (46), ಸುಧಾಕರ (30), ಅಶೋಕ ಮಲೆಕುಡಿಯ (40), ಪುಷ್ಪರಾಜ್ (25), ಶ್ರೀಧರ ಕುಂಬಾರ (48) ಹಾಗೂ ಚೆನ್ನಪ್ಪ ಗೌಡ (70) ಎಂದು ಗುರುತಿಸಲಾಗಿದೆ.
ಸ್ಥಳದಿಂದ ಐದು ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟುವ ಎರಡು ಬಾಲುಗಳು (ಸಣ್ಣ ಕತ್ತಿಗಳು) ಹಾಗೂ ರೂ. 970 ನಗದು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 15/2025, ಕಲಂ 87 ಕೆಪಿ ಅಕ್ಟ್ ಹಾಗೂ ಕಲಂ 11(1)(m)(ii), 11(1)(n) ಪ್ರಾಣಿ ಹಿಂಸೆ ತಡೆ ಕಾಯ್ದೆ-1960ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.







