Monday, August 31, 2026
spot_imgspot_img
spot_imgspot_img

ಪೊಲೀಸ್ ಕಸ್ಟಡಿಯಲ್ಲಿದ್ದ ದಲಿತ ಯುವಕ ಮೃತ್ಯು: ಪೊಲೀಸರ ವಿರುದ್ಧ ಚಿತ್ರಹಿಂಸೆ ಆರೋಪಿಸಿದ ಕುಟುಂಬಸ್ಥರು

- Advertisement -
- Advertisement -

ಮಧುರೈ : ತಮಿಳುನಾಡಿನ ಮಧುರೈನಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದ 26 ವರ್ಷದ ದಲಿತ ಯುವಕನೋರ್ವ ಮೃತಪಟ್ಟಿದ್ದಾನೆ. ವಿಚಾರಣೆ ವೇಳೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಆಕಾಶ್ ಮೃತ ಯುವಕ. ಈತನನ್ನು ಶಿವಗಂಗಾದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದರು. ANI ಜೊತೆ ಮಾತನಾಡಿದ ಆಕಾಶ್ ತಂದೆ ಕಣ್ಣನ್, “ಸ್ನೇಹಿತರ ನಡುವೆ ಜಗಳ ನಡೆದಿತ್ತು. ಪೊಲೀಸರು ನನ್ನ ಮಗ ಮತ್ತು ಘಟನೆಯಲ್ಲಿ ಭಾಗಿಯಾದ ಇನ್ನೋರ್ವನನ್ನು ಹುಡುಕಿಕೊಂಡು ನಮ್ಮ ಬಳಿ ಬಂದರು. ಬಳಿಕ ಪತ್ನಿ ಮತ್ತು ನನ್ನನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ಆಕಾಶ್ ಬಗ್ಗೆ ವಿಚಾರಿಸಿದರು. ಈ ಮಧ್ಯೆ ಆಕಾಶ್ ಮತ್ತು ಅವನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತು. ಆದರೆ, ಅವರು ನನ್ನ ಮಗನನ್ನು ಪೊಲೀಸ್ ಠಾಣೆಗೆ ಕರೆತರಲಿಲ್ಲ. ಇನ್ನೋರ್ವನನ್ನು ಮಾತ್ರ ಠಾಣೆಗೆ ಕರೆ ತಂದಿದ್ದಾರೆ. ನನ್ನ ಮಗನ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ ಎಂದು ಕಣ್ಣನ್ ಹೇಳಿದರು.”ಪೊಲೀಸರು ನನ್ನ ಮಗನನ್ನು ಒಬ್ಬಂಟಿಯಾಗಿ ಶಿವಗಂಗಾ ಪ್ರದೇಶಕ್ಕೆ ಕರೆದೊಯ್ದು ಅವನ ಕಾಲಿನ ಮೇಲೆ ಕಲ್ಲು ಇಟ್ಟು ಹಲ್ಲೆ ಮಾಡಿ ಅವನ ಕಾಲು ಮುರಿದರು. ಬಳಿಕ ಅವನನ್ನು ಶಿವಗಂಗಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.

ಆದರೆ ಈ ಬಗ್ಗೆ ನಮಗೆ ತಿಳಿದಿರಲಿಲ್ಲ. ನಂತರ, ಹೆಚ್ಚಿನ ಚಿಕಿತ್ಸೆಗೆ ಮಧುರೈನ ಸರಕಾರಿ ಆಸ್ಪತ್ರೆಗೆ ಕರೆತಂದರು. ನಮಗೆ ಮಾಹಿತಿ ಸಿಕ್ಕಿ ನಾವು ಅಲ್ಲಿಗೆ ತೆರಳಿದಾಗ ಪೊಲೀಸರು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಬಗ್ಗೆ ಆಕಾಶ್ ನಮಗೆ ಮಾಹಿತಿ ನೀಡಿದ್ದಾನೆ. ಮಗನ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಮತ್ತು ಅವರ ವಿರುದ್ಧ ಎಸ್ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು” ಎಂದು ಕಣ್ಣನ್ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!