




ಪುತ್ತೂರು : ದಾಂಪತ್ಯ ಕಲಹವು ಸಾವಿನಲ್ಲಿ ದುರಂತ ಅಂತ್ಯ ಕಂಡ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕಟ್ಟತ್ತಾರು ಸಮೀಪದ ಗೋಳ್ತಿಲ ಎಂಬಲ್ಲಿ ಇಂದು (ಮಾ.20) ಬೆಳಗ್ಗೆ ಸಂಭವಿಸಿದೆ.
ಗಂಡ-ಹೆಂಡತಿಯ ನಡುವಿನ ಜಗಳದಲ್ಲಿ ಹೆಂಡತಿ ಕೊಲೆಯಾಗಿದ್ದು, ಬಳಿಕ ಗಂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಿಳಿದುಬಂದಿದೆ.
ಮೃತ ಮಹಿಳೆಯನ್ನು ಕುಮಾರಮಂಗಲ ಮೂಲದ ಸಾವಿತ್ರಿ (42) ಎಂದು ಗುರುತಿಸಲಾಗಿದೆ. ಆರೋಪಿ ಪತಿಯನ್ನು ಎಮೆಟ್ಟಿ ನಿವಾಸಿ ಪುರುಷೋತ್ತಮ ಅಲಿಯಾಸ್ ಬೈರಪ್ಪ ಎಂದು ಗುರುತಿಸಲಾಗಿದೆ.
ಪತಿ ಮತ್ತು ಪತ್ನಿ ನಡುವೆ ನಡೆದ ತೀವ್ರ ವಾಗ್ವಾದವು ಹಿಂಸಾತ್ಮಕ ತಿರುವು ಪಡೆದು, ಪತಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ವರದಿಗಳು ತಿಳಿಸಿವೆ. ಘಟನೆಯ ಬಳಿಕ ಪತಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮಾಹಿತಿ ಪಡೆದ ತಕ್ಷಣ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಹಿನ್ನೆಲೆ ಕುರಿತು ಇನ್ನಷ್ಟೇ ಮಾಹಿತಿ ಬರಬೇಕಿದೆ. ತನಿಖೆ ಮುಂದುವರಿದಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.








