




ವಿಟ್ಲ: ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿಟ್ಲ ಪರಿಸರದಲ್ಲಿ ಬಾಡಿಗೆ ಕಾರು ಚಾಲಕರಾಗಿ ಗುರುತಿಸಿಕೊಂಡಿದ್ದ, ಅಳಿಕೆ ಗ್ರಾಮದ ಮುಳಿಯ ಅಡ್ಕ ನಿವಾಸಿ ಈಶ್ವರ್ ಮೂಲ್ಯ (71) ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿಟ್ಲದಲ್ಲಿ ಸುಮಾರು 45 ವರ್ಷಗಳಿಂದ ಬಾಡಿಗೆ ಕಾರು ಚಾಲನೆ ಮಾಡುತ್ತಿದ್ದ ಈಶ್ವರ್ ಅವರು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರು. ಮಾರ್ಚ್ 20ರಂದು ಎಂದಿನಂತೆ ವೃತ್ತಿಗೆ ಹಾಜರಾಗಿದ್ದ ಅವರು, ಕೇರಳದ ಪೆರೂರಿನ ಬೇಕರಿ ಮಾಲೀಕರೊಬ್ಬರ ಮನೆಗೆ ಹಾಗೂ ನಂತರ ಉಳ್ಳಾಲಕ್ಕೆ ಬಾಡಿಗೆ ಹೋಗಿ ಅಳಿಕೆಗೆ ವಾಪಸ್ಸಾಗಿದ್ದರು. ಅಂದು ಸಂಜೆ ಮನೆ ಸಮೀಪದ ಅಂಗಡಿಯಲ್ಲಿ ದಿನಪತ್ರಿಕೆ ಓದಿ, ಮೊಮ್ಮಕ್ಕಳಿಗೆ ತಿಂಡಿ ಖರೀದಿಸಿ ಮನೆಗೆ ತೆರಳಿದ್ದರು. ಆದರೆ, ಮಾರ್ಚ್ 21ರ ಮುಂಜಾನೆ 3 ಗಂಟೆಯ ಸುಮಾರಿಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ವಿಟ್ಲದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ದೇರ್ಲಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಅಂಬ್ಯುಲೆನ್ಸ್ ಸಜ್ಜಾಗುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಯಮುನಾ, ಪುತ್ರಿಯರಾದ ನಳಿನಾಕ್ಷಿ, ಗೀತಾ, ವಿದ್ಯಾ ಹಾಗೂ ಉಳ್ಳಾಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿರುವ ಪುತ್ರ ವಿನೋದ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಹಿರಿಯ ಚಾಲಕನ ಅಗಲಿಕೆಗೆ ವಿಟ್ಲದ ಚಾಲಕರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.








