✒️ಡಾ. ಮೈತ್ರಿ ಭಟ್, ವಿಟ್ಲ
ಆಟಿಸಂ ಕುರಿತು ಜನರ ತಿಳಿವಳಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತೀ ವರ್ಷ ಏಪ್ರಿಲ್ 2 ರಂದು ವಿಶ್ವ ಆಟಿಸಂ ದಿನವನ್ನು ಆಚರಿಸಲಾಗುತ್ತದೆ. ಈ 2026 ರ ವಿಶ್ವ ಆಟಿಸಂ ಜಾಗೃತಿ ದಿನದ ಥೀಮ್ “ಆಟಿಸಂ ಮತ್ತು ಮಾನವೀಯತೆ: ಪ್ರತಿಯೊಂದು ಜೀವಕ್ಕೂ ಮೌಲ್ಯವಿದೆ” ಎಂಬುದಾಗಿದೆ. ಇದು ಆಟಿಸಂನಿಂದ ಬಳಲುತ್ತಿರುವವರಿಗೂ ಇರುವ ಘನತೆ ಮತ್ತು ಸಮಾನ ಅವಕಾಶಗಳ ಮಹತ್ವವನ್ನು ತಿಳಿಸಿ, ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಗೌರವ, ತಿಳಿವಳಿಕೆ ಮತ್ತು ಬೆಂಬಲಕ್ಕೆ ಅರ್ಹನೆಂದು ಸಾರುತ್ತದೆ.ಆಟಿಸಂ (Autism Spectrum Disorder – ASD) ಅಥವಾ ಸ್ವಲೀನತೆ ಎಂಬುದು ನರಮಂಡಲದ ಬೆಳೆವಣಿಗೆಯ ನ್ಯೂನತೆಯಾಗಿದ್ದು, ಇದು ವ್ಯಕ್ತಿಯ ಸಾಮಾಜಿಕ ಸಂವಹನ, ನಡೆವಳಿಕೆ ಮತ್ತು ಕಲಿಕೆಯ ಮೇಲೆ ಪರಿಣಾಮವನ್ನು ಬೀರುತ್ತದೆ.

ಇದರ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ಕೆಲವರು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದರೆ, ಇನ್ನು ಕೆಲವರು ಹೆಚ್ಚು ತೀವ್ರವಾದ ಸವಾಲುಗಳನ್ನು ಎದುರಿಸಬೇಕಾಗಬಹುದು. ಸಾಮಾನ್ಯವಾಗಿ ಬಾಲ್ಯದ ಮೊದಲ ಮೂರು ವರ್ಷಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 2021 ರಲ್ಲಿ ಇಂಡಿಯನ್ ಜರ್ನಲ್ ಆಫ್ ಪೀಡಿಯಾಟ್ರಿಕ್ಸ್(IJP)ನಲ್ಲಿ ಪ್ರಕಟವಾದ ಲೇಖನದಲ್ಲಿ ಭಾರತದಲ್ಲಿ ಸುಮಾರು 68 ಮಕ್ಕಳಲ್ಲಿ 1 ಮಗುವು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್(ASD)ನಿಂದ ಬಳಲುತ್ತದೆ ಎಂದು ಹೇಳಲಾಗಿದೆ. ಅದರಲ್ಲೂ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ ಈ ರೋಗ ಲಕ್ಷಣಗಳು ಹೆಚ್ಚಾಗಿ ಕಂಡುಬರುವುದು ಪತ್ತೆಯಾಗಿದ್ದು, 1:3 ಅನುಪಾತದಲ್ಲಿದೆ. PLOS ಮೆಡಿಸಿನ್ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಆಟಿಸಂನಿಂದ ಬಳಲುತ್ತಿರುವ ಮಕ್ಕಳ ಜೀವಿತಾವಧಿ ಸುಮಾರು 10 ವರ್ಷಗಳು.
ಆಟಿಸಂ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಈ ಮಕ್ಕಳ ಬದುಕನ್ನು ಸುಧಾರಿಸುವಲ್ಲಿ ಆರಂಭಿಕ ಗುರುತಿಸುವಿಕೆ ಮತ್ತು ವೈದ್ಯಕೀಯ ನೆರವು ಅಗತ್ಯವಾಗಿರುವುದರಿಂದ ಇದರ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ. ಆಟಿಸಂಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ, ಇದು ವಂಶವಾಹಿನಿ ತೊಂದರೆಗಳು ಮತ್ತು ಪರಿಸರದ ಅಂಶಗಳ ಸಂಕೀರ್ಣ ಸಂಯೋಜನೆಯಿಂದ ಉಂಟಾಗುವುದೆಂದು ಹೇಳಲಾಗಿದೆ. ಸಂಶೋಧನೆಗಳ ಪ್ರಕಾರ, ಅನುವಂಶೀಯತೆ, ರಕ್ತಸಂಬಂಧದ ಮದುವೆ, ಹೆಣ್ಣುಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮದುವೆ, ಬೇಗ ಗರ್ಭ ಧರಿಸುವುದು, ಹೆರಿಗೆ ಸಮಯದಲ್ಲಿ ತೊಂದರೆ, ಕಡಿಮೆ ತೂಕ, ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಒಂದೇ ಗರ್ಭದಲ್ಲಿ ಹೊಂದಿದ್ದಾಗ ಆಟಿಸಂ ತೊಂದರೆಗೆ ಕಾರಣವಾಗಬಹುದು.
ಆಟಿಸಂನ ಪ್ರಮುಖ ಲಕ್ಷಣಗಳು:
ಭಾಷಾ ನ್ಯೂನತೆ:ಇವರ ಮಾತಿನ ಕಲಿಕೆಯಲ್ಲಿ ನಿಧಾನತೆ ಅಥವಾ ಅರ್ಥಮಾಡಿಕೊಳ್ಳುವಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ.
ಸಾಮಾಜಿಕ ಸಂವಹನದಲ್ಲಿ ತೊಂದರೆ:ಸೀಮಿತ ಸಾಮಾಜಿಕ ಸಂವಹನ ಅಂದರೆ ಸ್ಪಷ್ಟ ಮಾತಿನ ಕೌಶಲದ ಕೊರತೆಯಿದ್ದು, ಮಾತು ಮತ್ತು ವರ್ತನೆಗಳಲ್ಲಿ ತೊಂದರೆಗಳನ್ನು ಕಾಣಬಹುದು. ಅಂದರೆ ಇತರರೊಂದಿಗೆ ಬೆರೆಯಲು, ಭಾವನೆಗಳನ್ನು ಹಂಚಿಕೊಳ್ಳಲು ಮತ್ತು ಕಣ್ಣಿನ ಸಂಪರ್ಕ (Eye contact) ಸಾಧಿಸಲು ಕಷ್ಟಪಡುತ್ತಾರೆ. ಇವರು ಕೇಳಿದ ಪ್ರಶ್ನೆಗಳಿಗೆ ತಕ್ಷಣ ಉತ್ತರ ಕೊಡುವುದಿಲ್ಲ. ತೀವ್ರತರನಾದ ಆಟಿಸಂ ಹೊಂದಿದವರು ಕನಿಷ್ಠ ಶಬ್ದಗಳ ಉಚ್ಚಾರವನ್ನೂ ಮಾಡುವುದಿಲ್ಲ. ಅವರ ಬೌದ್ಧಿಕಮಟ್ಟವೂ ಅಲ್ಪಪ್ರಮಾಣದಾಗಿದ್ದು, ಮುಖಕೊಟ್ಟು ಮಾತನಾಡುವುದಿಲ್ಲ. ಕಾರಣವಿಲ್ಲದ ನಗು, ಅಳುವಿನ ಜೊತೆಗೆ ಇವರು ಸಂಬಂಧಗಳಿಗೆ ಸ್ಪಂದಿಸುವುದಿಲ್ಲ.
ಪುನರಾವರ್ತಿತ ನಡೆವಳಿಕೆ: ಒಂದೇ ರೀತಿಯ ಆಟಿಕೆಗಳನ್ನು ಜೋಡಿಸುವುದು, ಕೈ ಬೀಸುವುದು, ದೇಹವನ್ನು ಅಲುಗಾಡಿಸುವುದು (Stimming) ವಸ್ತುಗಳನ್ನು ತಿರುಗಿಸುವುದು, ಪುಟಗಳನ್ನು ನೋಡುತ್ತಾ ಇರುವುದು ಇತ್ಯಾದಿ ಆರಂಭಿಕ ಚಿಹ್ನೆಗಳನ್ನು ಗುರುತಿಸಬಹುದು
ಸ್ಥಿರ ದಿನಚರಿ: ಬದಲಾವಣೆಗಳನ್ನು ಇಷ್ಟಪಡದ ಇವರು ಒಂದೇ ಬಗೆಯ ಕಟ್ಟುನಿಟ್ಟಿನ ದಿನಚರಿಯನ್ನು ಬಯಸುತ್ತಾರೆ.
ಸಂವೇದನಾ ಸೂಕ್ಷ್ಮತೆ: ಇವರು ಶಬ್ದ, ಬೆಳಕು ಅಥವಾ ಸ್ಪರ್ಶಕ್ಕೆ ಅತಿಯಾದ ಅಥವಾ ಕಡಿಮೆ ಪ್ರತಿಕ್ರಿಯೆಯನ್ನು ತೋರುತ್ತಾರೆ. ಹೀಗೆ ತನ್ನಷ್ಟಕ್ಕೆ ತಾನು ಯಾವುದರ ಪರಿವೆ ಇರದಿರುವುದು. ತುಂಟತನ, ಕೋಪ, ಮಾಡಿದ್ದನ್ನೇ ಮಾಡುವುದು ಇವು ಆಟಿಸಂನ ಪ್ರಮುಖ ಲಕ್ಷಣಗಳು. ಇದನ್ನು ಗುಣಪಡಿಸಲಾಗದಿದ್ದರೂ, ಬಾಲ್ಯದಲ್ಲೇ ಪತ್ತೆಹಚ್ಚಿ ವಿಶೇಷ ಚಿಕಿತ್ಸೆ/ಶಿಕ್ಷಣದ ಮೂಲಕ ಅವರಿಗೂ ಒಂದು ಸುಮಧುರ ಬದುಕನ್ನು ಒದಗಿಸಬಹುದಾಗಿದೆ. ಮಕ್ಕಳಲ್ಲಿ ಇದರ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆಟಿಸಂನಿಂದ ಬಳಲುತ್ತಿರುವ ಮಗುವಿನ ನಡೆವಳಿಕೆಯು ಸಾಮಾನ್ಯ ಮಗುವಿನ ನಡೆವಳಿಕೆಗಿಂತ ಭಿನ್ನವಾಗಿರುತ್ತದೆ. ಇವರ ಜೊತೆ ತುಂಬಾ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ಇದಕ್ಕೆ ಯಾವುದೇ ಸರಿಯಾದ ಚಿಕಿತ್ಸೆ ಇಲ್ಲ. ಇದಕ್ಕೆ ಚಿಕಿತ್ಸೆಯೆಂದರೆ ಆಂಟಿ ಸೈಕೋಟಿಕ್ ಔಷಧಿಗಳು. ಜೊತೆಗೆ ಸ್ಪೀಚ್ ಥೆರಪಿ, ಆಕ್ಯುಪೇಷನಲ್ ಥೆರಪಿ ಮತ್ತು ಬಿಹೇವಿಯರಲ್ ಥೆರಪಿ ಮೂಲಕ ಮಗುವಿನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬಹುದು. ಇದು ಆಟಿಸಂನಿಂದ ಉಂಟಾಗುವ ಅಸಹಜ ವರ್ತನೆಯನ್ನು ನಿಯಂತ್ರಿಸಲು ಸಹಕರಿಸುತ್ತದೆ. ಇದನ್ನು ಗುಣಪಡಿಸುವಲ್ಲಿ ಔಷಧಿಗಳು ಮತ್ತು ಚಿಕಿತ್ಸೆಯ ಜೊತೆಗೆ ಸುತ್ತಮುತ್ತಲಿನ ಜನರ ನಡೆವಳಿಕೆ ಮತ್ತು ಸಹಕಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ.








