ಬರಹ: ಡಾ. ಮೈತ್ರಿ ಭಟ್, ವಿಟ್ಲ

ಸಂಸ್ಕೃತಿಯ ಬೇರುಗಳಿಗೆ ಸಂಭ್ರಮದ ಹೂವುಗಳನ್ನರಳಿಸಿ, ಪರಂಪರೆಯ ಹಣತೆಯಲ್ಲಿ ಭರವಸೆಯ ಬೆಳಕನ್ನು ಹೊತ್ತಿಸುವ ಹಬ್ಬಗಳ ಸಾಲಿನಲ್ಲಿ ದೀಪಾವಳಿಗೆ ವಿಶೇಷ ಸ್ಥಾನವಿದೆ. ಅಜ್ಞಾನದಿಂದ ಸುಜ್ಞಾನದ ಕಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಸಂದೇಶ ಸಾರುವ ದೀಪಾವಳಿ ಕೇವಲ ಬೆಳಕಿನ ಹಬ್ಬವಲ್ಲ, ಬದುಕಿಗೆ ಹೊಸ ಚೈತನ್ಯ ತುಂಬುವ ಹಬ್ಬವೂ ಹೌದು.‘ತಮಸೋಮಾ ಜ್ಯೋತಿರ್ಗಮಯ’ ಎಂಬ ಉಪನಿಷತ್ತಿನ ಉದಾತ್ತ ಆಶಯವನ್ನು ನೆನಪಿಸುವ ಈ ಹಬ್ಬ, ಮನುಷ್ಯನ ಅಂತರಂಗದಲ್ಲಿರುವ ಅಜ್ಞಾನ, ಅಹಂಕಾರ, ದ್ವೇಷ ಮತ್ತು ಅಸೂಯೆ ಎಂಬ ಕತ್ತಲೆಯನ್ನು ದೂರಮಾಡಿ ವಿವೇಕ, ಪ್ರೀತಿ ಹಾಗೂ ಮಾನವೀಯತೆಯ ಬೆಳಕನ್ನು ಹರಡುವ ಸಂಕೇತವಾಗಿದೆ.
ಕತ್ತಲಿನಿಂದ ಆವೃತವಾದ ಕೋಣೆಯಲ್ಲಿ ಪುಟ್ಟ ಹಣತೆಯೊಂದು ಬೆಳಗಿದರೂ ಸಾಕು, ಕತ್ತಲೆಯ ಸಾಮ್ರಾಜ್ಯ ಕ್ಷಣಾರ್ಧದಲ್ಲಿ ಕರಗಿಹೋಗುತ್ತದೆ. ಬೆಳಕಿನ ಶಕ್ತಿಯೇ ಅಂತಹುದು. ಬದುಕಿನಲ್ಲಿಯೂ ಸಂಕಟಗಳ ನೆರಳಿನ ನಡುವೆಯೇ ಭರವಸೆಯ ಬೆಳಕಿನ ಮೌಲ್ಯ ಹೆಚ್ಚುತ್ತದೆ. ಸೋಲಿನ ಅನುಭವವೇ ಗೆಲುವಿನ ಸಂಭ್ರಮವನ್ನು ಹೆಚ್ಚಿಸುವಂತೆ, ಕತ್ತಲೆಯ ಅನುಭವವೇ ಬೆಳಕಿನ ಮಹತ್ವವನ್ನು ತಿಳಿಸುತ್ತದೆ. ಹಾಗೆಂದು ಕತ್ತಲೆಯಲ್ಲಿಯೇ ಉಳಿಯಬೇಕಿಲ್ಲ. ಒಂದು ಪುಟ್ಟ ಬೆಳಕಿನ ಕಿಡಿ ಸಾಕು, ಹೊಸ ಹಾದಿಯೊಂದು ತೆರೆದುಕೊಳ್ಳಲು.ದೀಪಾವಳಿ ನಮಗೆ ಕಲಿಸುವ ಪಾಠವೂ ಇದೇ. ಬರಿಯ ಮಣ್ಣಿನ ಹಣತೆಯಲ್ಲಿ ಎಣ್ಣೆ ಸುರಿದು ಬತ್ತಿ ಹಚ್ಚಿದ ಮಾತ್ರಕ್ಕೆ ಬದುಕು ಬೆಳಗುವುದಿಲ್ಲ.
ನಮ್ಮ ಅಂತರಂಗದ ಹಣತೆಯಲ್ಲಿ ವಿವೇಕದ ಬತ್ತಿ, ಶ್ರದ್ಧೆಯ ತೈಲ ಹಾಗೂ ಆತ್ಮವಿಶ್ವಾಸದ ಜ್ಯೋತಿಯನ್ನು ಬೆಳಗಿಸಬೇಕಿದೆ. ಕಾಯಕವೇ ಬತ್ತಿಯಾಗಿ, ಶಿಸ್ತೇ ತೈಲವಾಗಿ, ಛಲವೇ ಜ್ಯೋತಿಯಾಗಿ ನಮ್ಮ ಬದುಕಿನ ದೀಪ ಪ್ರಜ್ವಲಿಸಬೇಕು. ಹಚ್ಚಿದ ಹಣತೆಯನ್ನು ಗಾಳಿಯಿಂದ ಕಾಪಾಡುವಂತೆ ನಮ್ಮೊಳಗೆ ಮೊಳಕೆಯೊಡೆಯುವ ಒಳಿತಿನ ಚಿಂತನೆಗಳನ್ನೂ ಅಹಂಕಾರ, ಅಸೂಯೆ ಮತ್ತು ದ್ವೇಷಗಳಿಂದ ರಕ್ಷಿಸಿಕೊಳ್ಳಬೇಕು.ನರಕಾಸುರನ ಸಂಹಾರದ ಸಂಕೇತವಾಗಿ ನರಕ ಚತುರ್ದಶಿ, ಸಂಪತ್ತು ಮತ್ತು ಸಮೃದ್ಧಿಯ ಆರಾಧನೆಯಾಗಿ ಲಕ್ಷ್ಮೀಪೂಜೆ, ದಾನಶೀಲ ಬಲಿಚಕ್ರವರ್ತಿಯ ಸ್ಮರಣೆಯಾಗಿ ಬಲಿಪಾಡ್ಯಮಿ ಹೀಗೆ ಪುರಾಣ, ಪರಂಪರೆ ಹಾಗೂ ನಂಬಿಕೆಗಳ ಹಲವು ಮಜಲುಗಳನ್ನು ದೀಪಾವಳಿ ಒಳಗೊಂಡಿದೆ. ಶ್ರೀರಾಮನ ಅಯೋಧ್ಯಾ ಆಗಮನವನ್ನು ದೀಪಗಳ ಸಾಲಿನಿಂದ ಸ್ವಾಗತಿಸಿದ ಜನಪದ ಸಂಭ್ರಮವೂ ಈ ಹಬ್ಬದ ಸಾಂಸ್ಕೃತಿಕ ನೆನಪಿನ ಭಾಗವಾಗಿದೆ. ಆಚರಣೆಗಳ ರೂಪ ಬೇರೆಬೇರೆಯಾಗಿದ್ದರೂ ಅವು ಸಾರುವ ಸಂದೇಶ ಒಂದೇ. ಕೆಡುಕಿನ ಮೇಲೆ ಒಳಿತಿನ ವಿಜಯ, ಅಜ್ಞಾನದ ಮೇಲೆ ಜ್ಞಾನದ ವಿಜಯ ಹಾಗೂ ಹತಾಶೆಯ ಮೇಲೆ ಭರವಸೆಯ ವಿಜಯ.
ದೀಪಾವಳಿಯ ಸಂದರ್ಭದಲ್ಲಿ ಮಣ್ಣಿನ ಹಣತೆಯ ಸರಳ ಸೌಂದರ್ಯವನ್ನು ಮರೆಯುವಂತಿಲ್ಲ. ಆಕಾಶದೆತ್ತರಕ್ಕೆ ಚಿಮ್ಮುವ ಪಟಾಕಿಯ ಬೆಳಕು ಕ್ಷಣಕಾಲ ಕಣ್ಣು ಕೋರೈಸಿ ಮರೆಯಾಗಬಹುದು. ಆದರೆ ಹಣತೆಯ ಮೃದು ಜ್ಯೋತಿ ಕತ್ತಲಿನೊಂದಿಗೆ ಮೌನವಾಗಿ ಸಂವಾದ ನಡೆಸುತ್ತಾ ಸುತ್ತಲನ್ನು ಬೆಳಗಿಸುತ್ತದೆ. ಒಂದು ಹಣತೆಯಿಂದ ಮತ್ತೊಂದು ಹಣತೆಯನ್ನು ಹಚ್ಚಿದರೂ ಮೊದಲ ಹಣತೆಯ ಬೆಳಕು ಕಡಿಮೆಯಾಗುವುದಿಲ್ಲ. ಬದಲಾಗಿ ಬೆಳಕಿನ ವಿಸ್ತಾರ ಹೆಚ್ಚುತ್ತದೆ. ಮನುಷ್ಯನ ಬದುಕೂ ಹೀಗೆಯೇ ಇರಬೇಕು. ನಮ್ಮಲ್ಲಿರುವ ಪ್ರೀತಿ, ಜ್ಞಾನ, ಕರುಣೆ ಮತ್ತು ಮಾನವೀಯತೆಯನ್ನು ಹಂಚಿದಷ್ಟೂ ಅವುಗಳ ಪ್ರಭೆ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.ಇಂದಿನ ಸಮಾಜದಲ್ಲಿ ಜಾತಿ, ಮತ, ಅಧಿಕಾರ, ಹಣ ಮತ್ತು ಕೀರ್ತಿಗಳ ವ್ಯಾಮೋಹದಲ್ಲಿ ಮನುಷ್ಯ ಸಂಬಂಧಗಳ ಬೆಳಕನ್ನೇ ಕಳೆದುಕೊಳ್ಳುತ್ತಿದ್ದಾನೆ. ಹತ್ತಿರವಿರುವ ಮನಸ್ಸುಗಳ ನಡುವೆ ದೂರದ ಗೋಡೆಗಳು ನಿರ್ಮಾಣವಾಗುತ್ತಿವೆ. ಇಂತಹ ಸಂದರ್ಭದಲ್ಲಿ ದೀಪಾವಳಿ ಕೇವಲ ಮನೆಗಳನ್ನು ಬೆಳಗಿಸುವ ಹಬ್ಬವಾಗದೆ ಮನಸ್ಸುಗಳನ್ನು ಬೆಸೆಯುವ ಹಬ್ಬವಾಗಬೇಕು. ಭಿನ್ನತೆಗಳ ಕತ್ತಲೆಯನ್ನು ಬದಿಗೊತ್ತಿ ಪ್ರೀತಿಯ ಹಣತೆಯನ್ನು ಹಚ್ಚಬೇಕು. ಮತ್ತೊಬ್ಬರ ಬದುಕಿನ ಕತ್ತಲಲ್ಲಿ ನಾವೊಂದು ಪುಟ್ಟ ಬೆಳಕಾಗುವ ಮನೋಭಾವ ಬೆಳೆಸಿಕೊಳ್ಳಬೇಕು.
ಹಬ್ಬದ ಸಂಭ್ರಮದ ನಡುವೆ ಪರಿಸರದ ಕಾಳಜಿಯನ್ನೂ ಮರೆಯಬಾರದು. ಪಟಾಕಿಗಳ ಅತಿಯಾದ ಬಳಕೆಯಿಂದ ಉಂಟಾಗುವ ಶಬ್ದ ಮತ್ತು ವಾಯುಮಾಲಿನ್ಯವನ್ನು ಕಡಿಮೆಗೊಳಿಸಿ, ಮಣ್ಣಿನ ಹಣತೆಗಳ ಬೆಳಕಿನೊಂದಿಗೆ ಸರಳ ಹಾಗೂ ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸುವ ಸಂಕಲ್ಪ ಮಾಡಬೇಕಿದೆ. ಹಬ್ಬದ ಸಂತೋಷ ನಮ್ಮಿಂದ ಇತರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದೂ ನಿಜವಾದ ಸಂಭ್ರಮದ ಭಾಗವೇ ಆಗಿದೆ.ದೀಪಾವಳಿ ನಮಗೆ ಹೊರಗಿನ ಕತ್ತಲೆಯನ್ನು ಮಾತ್ರವಲ್ಲ, ನಮ್ಮೊಳಗಿನ ಅಂಧಕಾರವನ್ನೂ ಗುರುತಿಸುವ ಅವಕಾಶ ನೀಡುತ್ತದೆ. ಹಿರಿಯರು ತಲೆಮಾರುಗಳಿಂದ ಕಾಪಾಡಿಕೊಂಡು ಬಂದ ಸಂಸ್ಕೃತಿಯ ನಂದಾದೀಪದಿಂದ ನಮ್ಮ ಬದುಕಿನ ಜ್ಯೋತಿಯನ್ನು ಬೆಳಗಿಸೋಣ.
ಕತ್ತಲನ್ನು ಶಪಿಸುವ ಬದಲು ಒಂದು ದೀಪ ಹಚ್ಚೋಣ; ಕತ್ತಲಿನ ಬಗ್ಗೆ ಮಾತನಾಡುವ ಬದಲು ನಾವೇ ಬೆಳಕಾಗಿ ಬದುಕೋಣ.ಏಕೆಂದರೆ, ನಿಜವಾದ ದೀಪಾವಳಿ ಮನೆಯಂಗಳದಲ್ಲಿ ಬೆಳಗುವ ಹಣತೆಯಲ್ಲ, ಹೃದಯದಂಗಳದಲ್ಲಿ ಅರಳುವ ಮಾನವೀಯತೆ. ಆ ಬೆಳಕಿನಲ್ಲಿ ಮನಸ್ಸುಗಳು ಕೆರಳದೆ ಅರಳಲಿ, ಬದುಕುಗಳು ಬರಿದಾಗದೆ ಬೆಳಗಲಿ. ದೀಪದಿಂದ ದೀಪ ಹಚ್ಚುತ್ತಾ, ಮನದಿಂದ ಮನ ಬೆಳಗುತ್ತಾ, ಮಾನವೀಯತೆಯ ಹೊಸ ಲೋಕವನ್ನು ಕಟ್ಟೋಣ. ಅದುವೇ ಬದುಕಿನ ನಿಜವಾದ ದೀಪಾವಳಿ!








