
ಮಾಣಿ: ಶೈಕ್ಷಣಿಕ ಸಾಧನೆಯಲ್ಲಿ ಗಮನಾರ್ಹ ಮೆಟ್ಟಿಲೇರಿದ ಬುಡೋಳಿ ಗಡಿಯಾರದಲ್ಲಿರುವ ವಿಸ್ಡಮ್ ಇಂಗ್ಲಿಷ್ ಮೀಡಿಯಂ ಶಾಲೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ವತಿಯಿಂದ 2025-26ನೇ ಶೈಕ್ಷಣಿಕ ವರ್ಷದ ಪ್ರತಿಷ್ಠಿತ ‘A’ ಗ್ರೇಡ್ ಲಭಿಸಿದೆ.SSLC ಪರೀಕ್ಷೆಯಲ್ಲಿ ಶಾಲೆಯು 100% ಫಲಿತಾಂಶ ದಾಖಲಿಸಿದ ಹಿನ್ನೆಲೆ ಈ ಗೌರವ ಲಭಿಸಿದ್ದು, ಶಾಲೆಯ ಗುಣಮಟ್ಟದ ಶಿಕ್ಷಣ ವ್ಯವಸ್ಥೆಗೆ ಮತ್ತೊಂದು ಮೈಲುಗಲ್ಲಾಗಿದೆ. ಮಂಡಳಿಯು 85 ಶೇಕಡಾ ಉನ್ನತ ಗುಣಮಟ್ಟದ ತೂಕಾಂಶ (Quality Weightage Percentage) ಆಧಾರದಲ್ಲಿ ಈ ಪ್ರಮಾಣಪತ್ರವನ್ನು ಪ್ರಧಾನ ಮಾಡಿದೆ. ಶಾಲೆಯ ಶೈಕ್ಷಣಿಕ ಮಟ್ಟ, ಬೋಧನಾ ಗುಣಮಟ್ಟ ಮತ್ತು ಒಟ್ಟು ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಮೌಲ್ಯಮಾಪನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಾರಿ ಪರೀಕ್ಷೆಗೆ ಹಾಜರಾದ 13 ವಿದ್ಯಾರ್ಥಿಗಳೂ ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ಶಾಲೆಯ ಸಾಧನೆಗೆ ವಿಶೇಷ ಮೆರುಗು ತಂದಿದ್ದಾರೆ. ಇವರಲ್ಲಿ 03 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 07 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಹಾಗೂ 03 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ಟಾಪರ್ ವಿದ್ಯಾರ್ಥಿಗಳಲ್ಲಿ ಹಾಜಿರಾ ಸುಹೈದಾ 600 ಅಂಕಗಳಲ್ಲಿ 96 ಶೇಕಡಾ (600 ಅಂಕಗಳು) ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಮುರ್ಷಿದಾ ಕೆ 583 ಅಂಕಗಳು (94%) ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದು, ಫಾತಿಮಾ ರಿಂಶಾ 563 ಅಂಕಗಳು (90%) ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.ಈ ಸಾಧನೆ ಕುರಿತು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಸಹಕಾರ ಮತ್ತು ಶಿಕ್ಷಕರ ಸಮರ್ಪಿತ ಬೋಧನೆಯ ಫಲವಾಗಿ ಈ ಗೌರವ ದೊರೆತಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲೂ ಇನ್ನಷ್ಟು ಉತ್ತಮ ಫಲಿತಾಂಶ ಸಾಧಿಸಲು ಸಂಸ್ಥೆ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.








