



ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ಪಶ್ಚಿಮ ಬಂಗಾಳದ 7 ಜಿಲ್ಲೆಗಳ 142 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಸುಮಾರು 3.22 ಕೋಟಿ ಮತದಾರರು ಇಂದು 1,448 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಉತ್ತರ 24 ಪರಗಣ (33), ದಕ್ಷಿಣ 24 ಪರಗಣ (31), ಹೂಗ್ಲಿ (18), ನಡಿಯಾ (17), ಹೌರಾ (16), ಪೂರ್ವ ಬರ್ಧಮಾನ್ (16), ಕೋಲ್ಕತ್ತಾ (11) ಜಿಲ್ಲೆಗಳಲ್ಲಿ ಮತದಾನ ಆರಂಭವಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ಸುವೇಂದು ಅಧಿಕಾರಿ ನಡುವಿನ ಪೈಪೋಟಿಯಿಂದಾಗಿ ಭವಾನಿಪುರ ಕ್ಷೇತ್ರವು ಈ ಹಂತದ ಪ್ರಮುಖ ಆಕರ್ಷಣೆಯಾಗಿದೆ. ಟಿಎಂಸಿ ಸರ್ಕಾರದ ಪ್ರಮುಖ ಸಚಿವರಾದ ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್ ಮತ್ತು ಬ್ರತ್ಯಾ ಬಸು ಅವರ ಕ್ಷೇತ್ರಗಳಿಗೂ ಇಂದು ಮತದಾನ ನಡೆಯುತ್ತಿದೆ. ಪಾರದರ್ಶಕತೆಗಾಗಿ ಈ ಹಂತದ ಎಲ್ಲಾ 41,001 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಸೌಲಭ್ಯವನ್ನು ಅಳವಡಿಸಲಾಗಿದೆ.
ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದ್ದು, ಸಂಜೆ 6:30ರ ನಂತರ ಎಕ್ಸಿಟ್ ಪೋಲ್ ಅಂಕಿಅಂಶಗಳು ಪ್ರಕಟವಾಗಲಿವೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಏಪ್ರಿಲ್ 23ರಂದು ನಡೆದಿದ್ದು, ರಾಜ್ಯದ ಇತಿಹಾಸದಲ್ಲೇ ದಾಖಲೆಯ ಶೇ. 93.19ರಷ್ಟು ಮತದಾನವಾಗಿತ್ತು. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








