


ನವದೆಹಲಿ: ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಕೊಳಕು ಶೌಚಾಲಯ ಕಂಡರೆ ಮೊಬೈಲ್ನಲ್ಲಿ ಫೋಟೋ ತೆಗೆದು ವರದಿ ಮಾಡುವವರಿಗೆ ಎನ್ಹೆಚ್ಎಐ ಬರೋಬ್ಬರಿ 1,000 ರೂ. ಹಣದ ಬಹುಮಾನ ನೀಡುವ ಅಭಿಯಾನ ಪ್ರಾರಂಭಿಸಿದೆ.
ಹೆದ್ದಾರಿ ಪ್ರಯಾಣಿಕರ ಪ್ರಯಾಣವನ್ನು ಸುಖಕರವಾಗಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಿನ್ನ ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದಂತೆ ಇನ್ನು ಮುಂದೆ ಕೊಳಕು ಶೌಚಾಲಯಗಳನ್ನು ಪತ್ತೆಹಚ್ಚಿ ವರದಿ ಮಾಡುವ ಜಾಗೃತ ಪ್ರಯಾಣಿಕರಿಗೆ ಇಲಾಖೆಯೇ ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್ ಮೂಲಕ ಹಣದ ಬಹುಮಾನ ನೀಡಲಿದೆ.
ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್ ಯೋಜನೆಯಡಿಯಲ್ಲಿ ಟೋಲ್ ಪ್ಲಾಜಾಗಳಲ್ಲಿ ಕೊಳಕು ಶೌಚಾಲಯಗಳನ್ನು ಪತ್ತೆಹಚ್ಚಿ ವರದಿ ಮಾಡುವ ಸಾರ್ವಜನಿಕರಿಗೆ 1,000 ರೂ. ಬಹುಮಾನವನ್ನು ನೀಡುತ್ತಿದೆ. ಆದರೆ, ಎನ್ಹೆಚ್ಎಐ 1,000ರೂ. ಬಹುಮಾನವನ್ನು ನಗದು ರೂಪದಲ್ಲಿ ನೀಡುವುದಿಲ್ಲ. ಬದಲಿಗೆ, ನಿಮ್ಮ ವಾಹನದ ಫಾಸ್ಟ್ಟ್ಯಾಗ್ ಖಾತೆಗೆ 1,000 ರೂ. ರೀಚಾರ್ಜ್ ಕ್ರೆಡಿಟ್ ಮಾಡಲಾಗುತ್ತದೆ.
ದೂರು ಸಲ್ಲಿಸುವವರು NHAI RajmargYatra ಆಪ್ ಮೂಲಕವೇ ನೇರವಾಗಿ ಜಿಯೋ-ಟ್ಯಾಗ್ಡ್ ಮತ್ತು ಟೈಮ್-ಸ್ಟ್ಯಾಂಪ್ ಇರುವ ಸ್ಪಷ್ಟವಾದ ಕೊಳಕು ಶೌಚಾಲಯದ ಫೋಟೋವನ್ನು ತೆಗೆಯಬೇಕು. ಈ ಫೋಟೋದೊಂದಿಗೆ ನಿಮ್ಮ ಹೆಸರು, ನಿಖರವಾದ ಸ್ಥಳ, ಮೊಬೈಲ್ ಸಂಖ್ಯೆ ಮತ್ತು ನಿಮ್ಮ ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
ಈ ಸೌಲಭ್ಯವು ಕೇವಲ ಎನ್ಹೆಚ್ಎಐ ವ್ಯಾಪ್ತಿಗೆ ಒಳಪಡುವ ಮತ್ತು ಅವುಗಳಿಂದಲೇ ನಿರ್ವಹಿಸಲ್ಪಡುವ ಟೋಲ್ ಪ್ಲಾಜಾ ಶೌಚಾಲಯಗಳಿಗೆ ಮಾತ್ರ ಅನ್ವಯಿಸುತ್ತದೆ. ಮೊದಲು ಸರಿಯಾದ ಫೋಟೋ ಅಪ್ಲೋಡ್ ಮಾಡಿದ ಮೊದಲ ದೂರುದಾರರಿಗೆ ಮಾತ್ರ ಬಹುಮಾನ ನೀಡಲಾಗುತ್ತದೆ. ಇಡೀ ಯೋಜನೆಯ ಅವಧಿಯಲ್ಲಿ ಒಂದು ವಾಹನ ನೋಂದಣಿ ಸಂಖ್ಯೆಗೆ ಕೇವಲ ಒಂದು ಬಾರಿ ಮಾತ್ರ ಬಹುಮಾನ ಗೆಲ್ಲಲು ಅವಕಾಶ. ನೀವು ಸಲ್ಲಿಸುವ ದೂರುಗಳನ್ನು ಎಐ ತಂತ್ರಜ್ಞಾನ ಮತ್ತು ಅಧಿಕಾರಿಗಳ ಮ್ಯಾನುವಲ್ ತಪಾಸಣೆಯ ಮೂಲಕ ಕಟ್ಟುನಿಟ್ಟಾಗಿ ಪರಿಶೀಲಿಸಿದ ಬಳಿಕವೇ ಬಹುಮಾನ ಗೆಲ್ಲಲು ಸಾಧ್ಯ ಎಂದು ತಿಳಿಸಿದ್ದಾರೆ.








