



ಹೊಸದಿಲ್ಲಿ: ಗುರುವಾರ ಕೇಂದ್ರವನ್ನು ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು, ಅತ್ಯಾಚಾರ ಸಂತ್ರಸ್ತೆಯರು 20 ವಾರಗಳ ಬಳಿಕವೂ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿಸಲು ಕಾನೂನಿಗೆ ತಿದ್ದುಪಡಿ ತರುವುದನ್ನು ಪರಿಗಣಿಸುವಂತೆ ಸೂಚಿಸಿದೆ.
ಏಮ್ಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾಜಾಯಮಾಲ್ಯ ಬಾಗ್ನಿ ಅವರ ಪೀಠವು, ಅತ್ಯಾಚಾರದಿಂದ ಗರ್ಭಧಾರಣೆ ಸಂಭವಿಸಿದಾಗ ಗರ್ಭಪಾತಕ್ಕೆ ಯಾವುದೇ ಸಮಯಮಿತಿ ಇರಬಾರದು ಎಂದು ಹೇಳಿತು. ಗರ್ಭಿಣಿಯಾಗಿರುವ 15 ವರ್ಷದ ಬಾಲಕಿಯ 30 ವಾರಗಳ ಭ್ರೂಣವನ್ನು ವೈದ್ಯಕೀಯವಾಗಿ ತೆಗೆದುಹಾಕಲು ಅವಕಾಶ ಕಲ್ಪಿಸಿರುವ ಸರ್ವೋಚ್ಚ ನ್ಯಾಯಾಲಯದ ಹಿಂದಿನ ಆದೇಶವನ್ನು ರದ್ದುಗೊಳಿಸಬೇಕು ಎಂದು ಏಮ್ಸ್ ತನ್ನ ಅರ್ಜಿಯಲ್ಲಿ ಕೋರಿತ್ತು.ಕಾಲಕ್ಕನುಗುಣವಾಗಿ ಕಾನೂನೂ ಬದಲಾಗಬೇಕು ಎಂದು ಹೇಳಿದ ಪೀಠವು, ಇದು ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವಾಗಿದ್ದು ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ಸಂತ್ರಸ್ತೆ ಜೀವನಪರ್ಯಂತ ನೋವು ಮತ್ತು ಆಘಾತವನ್ನು ಅನುಭವಿಸಬೇಕಾಗುತ್ತದೆ.ತಾಯಿಗೆ ಶಾಶ್ವತ ಆರೋಗ್ಯ ಸಮಸ್ಯೆ ಉಂಟಾಗದಿದ್ದರೆ ಗರ್ಭಪಾತವನ್ನು ನಡೆಸಬಹುದು ಎಂದು ತಿಳಿಸಿತು.
ಸಂತ್ರಸ್ತ ಬಾಲಕಿಯ ಪೋಷಕರಿಗೆ ಸಲಹೆಗಳನ್ನು ನೀಡುವಂತೆಯೂ ಏಮ್ಸ್‌ಗೆ ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು, ಆದರೆ ನಿರ್ಧಾರವು ಸಂಬಂಧಿತ ವ್ಯಕ್ತಿಯದ್ದೇ ಆಗಿರಬೇಕು ಎಂದು ಸ್ಪಷ್ಟಪಡಿಸಿತು.ಈ ದೇಶದಲ್ಲಿ ಅನೇಕ ಅನಾಥ ಮಕ್ಕಳಿದ್ದಾರೆ, ರಸ್ತೆಗಳಲ್ಲಿ ತೊರೆದುಹೋದ ಮಕ್ಕಳೂ ಇದ್ದಾರೆ. ಈ ಮಕ್ಕಳನ್ನು ಬಳಸಿಕೊಂಡು ಮಾಫಿಯಾಗಳೂ ನಡೆಯುತ್ತಿವೆ. ಅವರನ್ನು ನಾವು ನೋಡಬೇಕಿದೆ. ಇದು 15ರ ಹರೆಯದ ಬಾಲಕಿಯ ಅನಗತ್ಯ ಗರ್ಭಧಾರಣೆ ಪ್ರಕರಣವಾಗಿದೆ. ಅನಗತ್ಯ ಗರ್ಭಧಾರಣೆಯನ್ನು ಮಗುವಿನ ಮೇಲೆ ಹೇರುವಂತಿಲ್ಲ. ಅವಳು ಈಗ ಓದುತ್ತಿರಬೇಕು. ಅಂತಹ ಮಗುವನ್ನು ತಾಯಿಯಾಗಿಸಲು ನಾವು ಬಯಸುತ್ತಿದ್ದೇವೆ. ಬಾಲಕಿ ಅನುಭವಿಸಿರುವ ನೋವು, ಅವಮಾನವನ್ನು ಊಹಿಸಿಕೊಳ್ಳಿ ಎಂದು ಪೀಠವು ಹೇಳಿತು.ಏಮ್ಸ್ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು, 30 ವಾರಗಳ ಗರ್ಭಪಾತ ಸಾಧ್ಯವಿಲ್ಲ. ಈಗ ಗರ್ಭಪಾತ ಮಾಡಿದರೆ ತಾಯಿಗೆ ಜೀವನಪರ್ಯಂತ ಆರೋಗ್ಯ ಸಮಸ್ಯೆಗಳು ಕಾಡಬಹುದು ಮತ್ತು ಮುಂದೆ ಮಕ್ಕಳಾಗುವ ಸಾಧ್ಯತೆಯಿಲ್ಲ. ಮಗು ಹುಟ್ಟಿದ ಬಳಿಕ ಅದನ್ನು ದತ್ತು ನೀಡಬಹುದು. ಈಗ 30 ವಾರಗಳಾಗಿವೆ, ಅದು ಬದುಕಬಲ್ಲ ಜೀವವಾಗಿದೆ ಎಂದು ಹೇಳಿದರು.
ಗರ್ಭಪಾತದ ನಿರ್ಧಾರವು ಸಂತ್ರಸ್ತೆ ಮತ್ತು ಆಕೆಯ ಪೋಷಕರ ಆಯ್ಕೆಯಾಗಿರಬೇಕು, ಮಾಹಿತಿಪೂರ್ಣ ನಿರ್ಧಾರವನ್ನು ತೆಗೆದುಕೊಳ್ಳಲು ಏಮ್ಸ್ ಅವರಿಗೆ ನೆರವಾಗಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತು.ಎ.24ರಂದು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನಾ ಮತ್ತು ಉಜ್ವಲ ಭುಯಾನ್ ಅವರ ಪೀಠವು ವೈದ್ಯಕೀಯವಾಗಿ ಬಾಲಕಿಯ 30 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿತ್ತು.








