ಪುತ್ತೂರು: ದರ್ಬೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲಕಿ ಹಾಗೂ ಅವರ ಮಗನ ವಿರುದ್ಧ ದಾಖಲಾಗಿರುವ ಕೊಲೆಯತ್ನ ಪ್ರಕರಣ ಮತ್ತು ಪೊಲೀಸ್ ಜೀಪಿನೊಳಗೆ ನುಗ್ಗಿ ಆರೋಪಿಗೆ ಹಲ್ಲೆ ನಡೆಸಿದ ಪ್ರಕರಣ—ಎರಡನ್ನೂ ಸಮಗ್ರವಾಗಿ ತನಿಖೆ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ.ದರ್ಬೆಯ ಲ್ಯಾಮಿನೇಶನ್ ಅಂಗಡಿಯಲ್ಲಿ ಲ್ಯಾಮಿನೇಶನ್‌ಗೆ ನೀಡಲಾಗಿದ್ದ ದಾಖಲೆಯೊಂದಕ್ಕೆ ಹಾನಿಯಾದ ಬಳಿಕ ಈ ಘಟನೆ ನಡೆದಿತ್ತು. ಈ ವೇಳೆ ಸ್ಥಳದಲ್ಲಿ ಗಲಾಟೆ ನಡೆದಿದ್ದು, ಪೊಲೀಸರು ಅಂಗಡಿ ಮಾಲಕಿ ಅಂಜನಾ ಎಸ್. ಪೈ ಹಾಗೂ ಅವರ ಪುತ್ರ ಸುದರ್ಶನ್ ಪೈ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಕೊಲೆಯತ್ನಕ್ಕೆ ಸಂಬಂಧಿಸಿದ ಗಂಭೀರ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಸುದರ್ಶನ್ ಪೈ ಅವರನ್ನು ಬಂಧಿಸಲಾಗಿತ್ತು.ಇದೇ ವೇಳೆ, ಪೊಲೀಸ್ ವಶದಲ್ಲಿದ್ದ ಸಂದರ್ಭ ಸುದರ್ಶನ್ ಪೈ ಅವರ ಮೇಲೆ ಕೆಲವರು ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು.ತಮ್ಮ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಅಂಜನಾ ಪೈ ಹಾಗೂ ಸುದರ್ಶನ್ ಪೈ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಆ.27ರಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆಯಿತು. ಅರ್ಜಿದಾರರ ಪರ ಹಿರಿಯ ವಕೀಲ ಡಾ. ಅರುಣ್ ಶ್ಯಾಂ ವಾದ ಮಂಡಿಸಿ, ಗಲಾಟೆ ವೇಳೆ ಪೊಲೀಸರ ಎದುರೇ ಪೊಲೀಸ್ ಜೀಪಿನೊಳಗೆ ನುಗ್ಗಿ ದೂರುದಾರರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿದೆ. ಆದರೆ ಅವರ ವಿರುದ್ಧ ಲಘು ಪ್ರಕರಣ ದಾಖಲಿಸಲಾಗಿದ್ದು, ಹಲ್ಲೆಗೊಳಗಾದ ಅಂಜನಾ ಪೈ ಹಾಗೂ ಸುದರ್ಶನ್ ಪೈ ವಿರುದ್ಧವೇ ಸೆಕ್ಷನ್ 307ರಡಿ ಕೊಲೆಯತ್ನದ ಗಂಭೀರ ಆರೋಪ ದಾಖಲಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.ಪೊಲೀಸರು ಏಕಪಕ್ಷೀಯವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ನಡೆಸಿದವರ ವಿರುದ್ಧವೂ ಸೆಕ್ಷನ್ 307ರಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗಿತ್ತು. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಎಲ್ಲರಿಗೂ ಸಮಾನ ನ್ಯಾಯ ದೊರೆಯಬೇಕು ಎಂದು ವಾದಿಸಿದರು.
ಪೊಲೀಸರ ಕ್ರಮದ ಬಗ್ಗೆ ನ್ಯಾಯಪೀಠ ಅಸಮಾಧಾನ
ಪೊಲೀಸರ ಎದುರೇ ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ನಡೆಸಿರುವುದು ಗಂಭೀರ ವಿಚಾರ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಈ ಸಂಬಂಧ ಯಾವ ಪ್ರಕರಣ ದಾಖಲಿಸಲಾಗಿದೆ ಮತ್ತು ಆರೋಪಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ದಾಖಲೆಗಳೊಂದಿಗೆ ಆ.29ರಂದು ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು.
ಎರಡೂ ಪ್ರಕರಣಗಳ ಸಮಗ್ರ ತನಿಖೆಗೆ ಸೂಚನೆ
ಸೆ.2ರಂದು ಪ್ರಕರಣದ ವಿಚಾರಣೆ ಮುಂದುವರಿದ ವೇಳೆ, ದೂರುದಾರರ ವಿರುದ್ಧ ದಾಖಲಾಗಿರುವ ಪ್ರಕರಣ ಹಾಗೂ ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ—ಎರಡನ್ನೂ ಸಮಗ್ರವಾಗಿ ತನಿಖೆ ನಡೆಸುವಂತೆ ನ್ಯಾಯಪೀಠ ಸೂಚಿಸಿತು.ದೂರುದಾರರ ವಿರುದ್ಧ ಸೆಕ್ಷನ್ 307ರಡಿ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ತನಿಖೆಯಲ್ಲಿ ಕಂಡುಬಂದರೆ ಅದನ್ನು ಕೈಬಿಡಬಹುದು. ಮತ್ತೊಂದೆಡೆ, ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸೆಕ್ಷನ್ 307 ಅನ್ವಯವಾಗುತ್ತದೆ ಎಂದು ಕಂಡುಬಂದರೆ ಆ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬಹುದು. ಒಟ್ಟಿನಲ್ಲಿ ಎರಡೂ ಪ್ರಕರಣಗಳ ಸಮಗ್ರ ತನಿಖೆ ನಡೆಯಬೇಕು ಎಂದು ನ್ಯಾಯಪೀಠ ತಿಳಿಸಿತು.
ತನಿಖೆಯಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದರೆ ದೂರುದಾರರು ಮತ್ತೆ ನ್ಯಾಯಪೀಠದ ಮುಂದೆ ಬರಲು ಸ್ವತಂತ್ರರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ವಿಚಾರಣೆಯನ್ನು ಮುಂದೂಡಿದರು.
ಅರ್ಜಿದಾರರ ಪರ ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.








