



ಚಾಮರಾಜನಗರ: ನಿಧಿ ಆಸೆಗಾಗಿ ಯುವಕನೋರ್ವ ತನ್ನ ಹೆತ್ತ ತಾಯಿಯನ್ನೇ ಬಲಿ ಕೊಡಲು ಮುಂದಾಗಿದ್ದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಕೊಂಡಯ್ಯನ ಮಾದಶೆಟ್ಟಿ ಎಂಬಾತ ತನ್ನ ದೃಷ್ಟಿ ಹೀನ ಮತ್ತು ಶ್ರವಣದೋಷವುಳ್ಳ ತಾಯಿ ಮಾದಮ್ಮಶೆಟ್ಟಿ(80)ಯನ್ನು ಬಲಿ ಕೊಡಲು ಮುಂದಾಗಿದ್ದನು. ಇಂದು(ಮೇ 1) ಹುಣ್ಣಿಮೆಯ ದಿನ ಬಲಿ ನೀಡಿದರೆ ಮನೆಯಲ್ಲಿ ನಿಧಿ ಸಿಗುತ್ತದೆ ಎಂಬ ಮಾಟಗಾರನ ಮಾತನ್ನು ನಂಬಿ ಈ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಎಂದು ತಿಳಿದು ಬಂದಿದೆ.
ತನ್ನ ಮನೆಯಲ್ಲೇ ಸುಮಾರು 4 ಅಡಿ ಆಳದ ಗುಂಡಿ ತೋಡಿದ್ದ ಆರೋಪಿ, ಅಲ್ಲಿ ಮಡಕೆ, ಲಿಂಬೆಹಣ್ಣು, ಅರಿಶಿನ, ಕುಂಕುಮ ಮತ್ತು ಕಳಸವನ್ನಿಟ್ಟು ಮಾಟ-ಮಂತ್ರದ ಪೂಜೆ ನಡೆಸುತ್ತಿದ್ದನು. ಇದನ್ನು ಕಂಡ ಗ್ರಾಮಸ್ಥರು ಅನುಮಾನಗೊಂಡು ತಕ್ಷಣ ಚಾಮರಾಜನಗರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ದಾಳಿ ನಡೆಸುತ್ತಿದ್ದಂತೆಯೇ ಪೂಜೆ ಮಾಡಿಸುತ್ತಿದ್ದ ಮಾಟಗಾರ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿ ಮಗ ಮಾದಶೆಟ್ಟಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








