Tuesday, July 14, 2026
spot_imgspot_img
spot_imgspot_img

ಪ್ರಧಾನಿ ಸಂಚರಿಸುತ್ತಿದ್ದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ: ತನಿಖೆಗಿಳಿದ ಎನ್‌ಐಎ

- Advertisement -
- Advertisement -

ಬೆಂಗಳೂರು: ಪ್ರಧಾನಿ ಮೋದಿ ಅವರು ಸಂಚರಿಸುತ್ತಿದ್ದ ಮಾರ್ಗದಲ್ಲಿ ಎರಡು ಜಿಲೆಟಿನ್ ಕಡ್ಡಿ ಪತ್ತೆಯಾದ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಹೆಚ್ಚಿನ ತನಿಖೆಗೆ ಇಳಿದಿದ್ದು, ಸೋಮವಾರ (ಮೇ11) ರಾಷ್ಟ್ರೀಯ ತನಿಖಾ ದಳದ ಡಿವೈಎಸ್ಪಿ ನೇತೃತ್ವದ ತಂಡವು ಜಿಲೆಟಿನ್ ಕಡ್ಡಿ ಪತ್ತೆಯಾದ ಬೆಂಗಳೂರು ಹೊರವಲಯದ ತಾತಗುಣಿಯ ಸಮೀಪದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಮೇ.10ರಂದು ನಡೆದ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಲು ಪ್ರಧಾನಮಂತ್ರಿ ಬೆಂಗಾವಲು ಪಡೆಯು ಬಳಸಬೇಕಿದ್ದ ಕಗ್ಗಲೀಪುರದ ತಾತಗುಣಿ ಬಳಿಯಿರುವ ನೈಸ್‌ರಸ್ತೆ ಜಂಕ್ಷನ್‌ನಿಂದ ಸುಮಾರು ಒಂದು ಕಿ.ಮೀ. ದೂರದ ರಸ್ತೆ ಪಕ್ಕದಲ್ಲಿ ಪ್ರಧಾನಿ ಬರುವ ಮೊದಲೇ ಜಿಲೆಟಿನ್ ಕಡ್ಡಿ ಪತ್ತೆಯಾಗಿತ್ತು. ಕೂಡಲೇ ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಸೋಮವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ, ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ ಗೌಡ ಅವರಿಂದ ಎನ್‌ಐಎ ಅಧಿಕಾರಿಗಳು ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.ಮಧ್ಯೆ ಸೋಮವಾರ ಮಧ್ಯಾಹ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್ ಕುಮಾ‌ರ್ ಸಿಂಗ್‌, ಪ್ರಧಾನಿ ಮೋದಿ ಅವರ ಬೆಂಗಳೂರು ಭೇಟಿ ಸಂದರ್ಭದಲ್ಲಿ ಅವರು ಸಂಚರಿಸುವ ಮಾರ್ಗದ ಪಕ್ಕದಲ್ಲೇ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣದ ತನಿಖೆಗೆ ಆರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದರು.

ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸುವುದರ ಜೊತೆಗೆ, ಬೆಂಗಳೂರು ದಕ್ಷಿಣ ಮತ್ತು ರಾಮನಗರ ಭಾಗದ ಕ್ವಾರಿಗಳಲ್ಲಿ ಬಳಕೆಯಾಗುವ ಜಿಲೆಟಿನ್ ಕಡ್ಡಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತಾಂತ್ರಿಕ ಕಣ್ಣಾವಲು ಬಳಸಿ ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.ಪ್ರಧಾನಿ ಭೇಟಿಗಾಗಿ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾದ ಪ್ರದೇಶದಲ್ಲಿ ಸ್ಫೋಟಕ ಸಾಧನ ಇಟ್ಟಿರುವುದಾಗಿ ಕರೆ ಮಾಡಿದ ವ್ಯಕ್ತಿ ಹೇಳಿದ್ದ.

ಬೆದರಿಕೆ ಕರೆ ಮಾಡಿದ ನಂತರ, ಆರೋಪಿ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ. ತಕ್ಷಣವೇ ಕೋರಮಂಗಲ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಯಿತು. ತನಿಖೆ ವೇಳೆ ಕರೆ ಕೋರಮಂಗಲದ ಕೆಎಚ್‌ ಬಿ ಕಾಲೋನಿಯಿಂದ ಬಂದಿರುವುದು ಪಲೀಸರಿಗೆ ಕಂಡುಬಂದಿದೆ ಎಂದು ಸೀಮಂತ್ ಕುಮಾ‌ರ್ ಸಿಂಗ್ ವಿವರಿಸಿದರು.ಆಗ್ನೆಯ ವಿಭಾಗ, ಕೇಂದ್ರ ಅಪರಾಧ ಶಾಖೆ (ಸಿಸಿಬಿ) ಮತ್ತು ಇತರ ಪೊಲೀಸ್ ಘಟಕಗಳ ಸಿಬ್ಬಂದಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸುಳ್ಳು ಮಾಹಿತಿ ನೀಡುವುದು, ಬೆದರಿಕೆ ಹಾಕುವುದು ಮತ್ತು ವಂಚನೆ ಕರೆ ಮಾಡುವುದು ಗಂಭೀರ ಅಪರಾಧಗಳಾಗಿದ್ದು, ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.ಆರೋಪಿಯು ತನ್ನ ಮೊಬೈಲ್ ಪೋನ್ ಬಳಸಿ ವಿವಿಧ ಸ್ಥಳಗಳಿಗೆ ಅಂತಹ ಕರೆಗಳನ್ನು ಮಾಡುವ ಮತ್ತು ಬೆದರಿಕೆ ಸಂದೇಶ ಕಳುಹಿಸುವ ಅಭ್ಯಾಸವನ್ನು ಹೊಂದಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕೃತ್ಯದ ಹಿಂದಿನ ಉದ್ದೇಶವನ್ನು ಪೊಲೀಸರು ಸಹ ತನಿಖೆ ನಡೆಸುತ್ತಿದ್ದರು. ಸದ್ಯಕ್ಕೆ ಇದು ವಂಚನೆ ಕರೆ ಎಂದು ತೋರುತ್ತದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದರು.

ಆರೋಪಿಯ ಮಾನಸಿಕ ಆರೋಗ್ಯ ಸ್ಥಿತಿಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೀಮಂತ್ ಕುಮಾರ್ ಸಿಂಗ್, ವೈದ್ಯರು ಆರೋಪಿಯನು ಪರೀಕ್ಷಿಸಿದ್ದು, ವರದಿ ಬಳಿಕ ಹೆಚ್ಚಿನ ವಿವರ ತಿಳಿಯಲಿದೆ ಮತ್ತು ಈ ಹಿಂದೆ ಆತ ಎಲ್ಲಾದರೂ ಚಿಕಿತ್ಸೆ ಪಡೆದಿದ್ದನಾ ಎಂಬುದನ್ನು ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿ ತನಿಖೆಯ ಭಾಗವಾಗಿ ಪೊಲೀಸ್ ವಶದಲ್ಲಿದ್ದಾನೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

- Advertisement -

Related news

error: Content is protected !!