




ನವದೆಹಲಿ: ಪಾಕಿಸ್ತಾನಕ್ಕೆ ಭಾರತೀಯ ಸೇನೆ ಮತ್ತೊಮ್ಮೆ ಅತ್ಯಂತ ಕಠಿಣ ಹಾಗೂ ನೇರ ಎಚ್ಚರಿಕೆಯನ್ನು ನೀಡಿದೆ. “ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಮುಂದುವರಿಸಿ, ಭಾರತವನ್ನು ಗುರಿಯಾಗಿಸಿಕೊಂಡರೆ, ಪಾಕ್ ಕೇವಲ ‘ಇತಿಹಾಸ’ ಪುಟ ಸೇರಬೇಕೋ ಅಥವಾ ‘ಭೂಗೋಳ’ದ ನಕ್ಷೆಯಲ್ಲಿ ಉಳಿಯಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕಾಗುತ್ತದೆ,” ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ತಿಳಿಸಿದ್ದಾರೆ.
ಕಳೆದ ವರ್ಷ ನಡೆದ ‘ಆಪರೇಷನ್ ಸಿಂದೂರ್’ ಬಳಿಕ ಪಾಕಿಸ್ತಾನಕ್ಕೆ ಭಾರತೀಯ ಸೇನೆಯಿಂದ ಸಿಕ್ಕ ಅತ್ಯಂತ ತೀಕ್ಷ್ಮವಾದ ಎಚ್ಚರಿಕೆ ಇದಾಗಿದೆ. “ಪಾಕಿಸ್ತಾನವು ಭಾರತದ ಮೇಲೆ ಮತ್ತೊಮ್ಮೆ ಪ್ರಚೋದನಾತ್ಮಕ ದಾಳಿ ನಡೆಸಿದರೆ ಭಾರತದ ಪ್ರತಿಕ್ರಿಯೆ ಹೇಗಿರುತ್ತದೆ?” ಎಂಬ ಪ್ರಶ್ನೆಗೆ ಸೇನಾ ಮುಖ್ಯಸ್ಥರು ಈ ಆಕ್ರೋಶದ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯ ಮಾನೆಕ್ಷಾ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ‘ಸೇನಾ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಜನರಲ್ ಉಪೇಂದ್ರ ದ್ವಿವೇದಿ, ಪಹಲ್ಲಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ್ದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಮೊದಲ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲೇ ಈ ಹೇಳಿಕೆ ನೀಡಿದ ಅವರು, ಪಾಕಿಸ್ತಾನವು ಭಯೋತ್ಪಾದಕರನ್ನು ಪೋಷಿಸುವುದನ್ನು ಮತ್ತು ಭಾರತದ ವಿರುದ್ಧ ಸಂಚು ರೂಪಿಸುವುದನ್ನು ಮುಂದುವರಿಸಿದರೆ, ಅವರು ಜಾಗತಿಕ ನಕ್ಷೆಯಲ್ಲಿ ಭೂಗೋಳವಾಗಿ ಇರಬೇಕೋ ಅಥವಾ ಇತಿಹಾಸದ ಪುಟ ಸೇರಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಳೆದ ವರ್ಷದ ಕಾರ್ಯಾಚರಣೆಯ ವೇಳೆ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಭಾರತವು ಪಾಕಿಸ್ತಾನದ 11 ಪ್ರಮುಖ ಸೇನಾ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಬಳಿಕ, ಪಾಕಿಸ್ತಾನದ ಮನವಿಯ ಮೇರೆಗೆ ಕಳೆದ ಮೇ 10 ರಂದು ಕದನ ವಿರಾಮ ಘೋಷಿಸಲಾಗಿತ್ತು.
ಭಾರತವು ಪಾಕಿಸ್ತಾನಕ್ಕೆ ಇಂತಹ ಕಠಿಣ ಎಚ್ಚರಿಕೆ ನೀಡುತ್ತಿರುವುದು ಇದೇ ಮೊದಲಲ್ಲ ಕಳೆದ ವರ್ಷ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಇದೇ ರೀತಿಯ ಎಚ್ಚರಿಕೆ ನೀಡಿದ್ದರು. ಗುಜರಾತ್‌ನ ಕಚ್ ನದಿಯ ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನ ಅತಿಕ್ರಮಣ ಮಾಡಲು ಯತ್ನಿಸಿದರೆ, ಅದರ ಇತಿಹಾಸ ಮತ್ತು ಭೂಗೋಳ ಎರಡನ್ನೂ ಬದಲಾಯಿಸುವಂತಹ “ದಟ್ಟ ಪ್ರತಿಕ್ರಿಯೆ” ಎದುರಿಸಬೇಕಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದರು. ಇದೀಗ ಸೇನಾ ಮುಖ್ಯಸ್ಥರು ರಕ್ಷಣಾ ಸಚಿವರ ಅದೇ ಮಾತುಗಳನ್ನು ಪುನರುಚ್ಚರಿಸುವ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.








