





ಹುಬ್ಬಳ್ಳಿ: ಆರು ಮಂದಿ ದುಷ್ಕರ್ಮಿಗಳ ತಂಡ ಆಭರಣ ಅಂಗಡಿಗೆ ನುಗ್ಗಿ ಸುಮಾರು 40 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ-ಬೆಳ್ಳಿ ದೋಚಿ ಪರಾರಿಯಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಮುಖ ಮುಚ್ಚಿಕೊಂಡು ಕೈಗವಸು ಧರಿಸಿದ್ದ ಆರು ಮಂದಿ ದುಷ್ಕರ್ಮಿಗಳು ಮಧ್ಯರಾತ್ರಿ ಬಳಿಕ ಅಂಗಡಿಯ ಎರಡೂ ಶಟರ್ ಗಳನ್ನು ಕತ್ತರಿಸಿ ಒಳನುಗ್ಗಿದ್ದಾರೆ. ಅಂಗಡಿಗೆ ಪ್ರವೇಶಿಸಿದ ಬಳಿಕ ಒಳಗೆ ಅಳವಡಿಸಿದ್ದ ನಾಲ್ಕು ಸಿಸಿಟಿವಿ ಕ್ಯಾಮೆರಾಗಳಲ್ಲಿ ಮೂರನ್ನು ಮುಚ್ಚಿಹಾಕಿ, ಲಾಕರ್ ಸಮೇತ ಪರಾರಿಯಾಗಿದ್ದಾರೆ.
ಆದರೆ, ಮುಚ್ಚದೇ ಉಳಿದಿದ್ದ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಅವರ ಕೃತ್ಯ ಸಂಪೂರ್ಣವಾಗಿ ದಾಖಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ 21 ಲಕ್ಷ ರೂ. ಮೌಲ್ಯದ 19 ಕೆಜಿ ಬೆಳ್ಳಿ ವಸ್ತುಗಳು ಹಾಗೂ 22 ಲಕ್ಷ ರೂ. ಮೌಲ್ಯದ 219ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಸಂಬಂಧ ಕಳ್ಳತನ ಪ್ರಕರಣ ದಾಖಲಾಗಿದ್ದು, ಕಳ್ಳತನದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.








