Tuesday, July 21, 2026
spot_imgspot_img
spot_imgspot_img

ಮಂಗಳೂರು: ಅಪಘಾತದಲ್ಲಿ ಬೈಕ್‌ ಸವಾರ ಮೃತ್ಯು ಪ್ರಕರಣ: ರಿಕ್ಷಾ ಚಾಲಕ, ಮಾಲಕನಿಗೆ ಜೈಲು ಶಿಕ್ಷೆ

- Advertisement -
- Advertisement -

ಮಂಗಳೂರು, ಮೇ 21: ನಗರದ ಬಿಜೈ ಜಂಕ್ಷನ್ ಬಳಿ ಬೈಕ್‌ ಮತ್ತು ರಿಕ್ಷಾ ಮಧ್ಯೆ ಸಂಭವಿಸಿದ ಅಪಘಾತ ಪ್ರಕರಣದಲ್ಲಿ ಬೈಕ್ ಸವಾರನ ಸಾವಿಗೆ ಕಾರಣವಾಗಿದ್ದಲ್ಲದೆ, ರಿಕ್ಷಾ ಚಾಲಕ ಸ್ಥಳದಿಂದ ಪರಾರಿಯಾಗಿರುವುದು ಮತ್ತು ಉರ್ಜಿತ ಲೈಸನ್ಸ್ ಇಲ್ಲದ ಚಾಲಕನಿಗೆ ರಿಕ್ಷಾ ಚಲಾಯಿಸಲು ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕ ಮತ್ತು ಮಾಲಕನಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

2023ರ ಫೆ.21ರಂದು ಬಿಜೈ ಜಂಕ್ಷನ್ ಕಡೆಯಿಂದ ರಂಗೋಲಿ ಕ್ರಾಸ್ ಕಡೆಗೆ ತೆರಳುವ ರಸ್ತೆಯ ಎಸ್‌ಎಲ್‌ವಿ ಬುಕ್‌ಹೌಸ್ ಮುಂದೆ ರಿಕ್ಷಾ ಚಾಲಕ ಸಾಯಿರಾಮ್ ಯು-ಟರ್ನ್ ಮಾಡುವ ವೇಳೆ ಬಿಜೈ ಕಡೆಗೆ ಬರುತ್ತಿದ್ದ ಬೈಕ್ ಸವಾರ ಕವನ್ ಆಳ್ವಾರ ಬೈಕ್‌ ರಿಕ್ಷಾಕ್ಕೆ ಢಿಕ್ಕಿಯಾಗಿತ್ತು. ಪರಿಣಾಮ ಬೈಕ್‌ ಸಮೇತ ಸವಾರ ಎಸೆಯಲ್ಪಟ್ಟು ರಸ್ತೆ ಬದಿಯಲ್ಲಿದ್ದ ಮರಕ್ಕೆ ಗುದ್ದಿ ತಲೆಗೆ ಗಂಭೀರ ಗಾಯವಾಗಿತ್ತು. ಆದರೆ ರಿಕ್ಷಾ ಚಾಲಕನು ಬೈಕ್‌ಸವಾರನಿಗೆ ಯಾವುದೇ ಆರೈಕೆ, ಚಿಕಿತ್ಸೆ ನೀಡಲು ಮುಂದಾಗದೇ ಸ್ಥಳದಿಂದ ಪರಾರಿಯಾಗಿದ್ದ. ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಬಳಿಕ ಮೃತಪಟ್ಟಿದ್ದರು. ತನಿಖೆಯ ವೇಳೆ ರಿಕ್ಷಾ ಚಾಲಕನ ಬಳಿ ಉರ್ಜಿತ ಚಾಲನ ಪರವಾನಗಿ ಇಲ್ಲದಿರುವುದು ಕಂಡು ಬಂದಿತ್ತು.

ಹಿನ್ನೆಲೆಯಲ್ಲಿ ರಿಕ್ಷಾ ಚಾಲಕ ಹಾಗೂ ಆರ್‌ಸಿ ಮಾಲಕನ ವಿರುದ್ಧ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಇನ್ಸಪೆಕ್ಟರ್ ನಾಗರಾಜ್‌ ಕೆ.ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ಕೈಗೆತ್ತಿಕೊಂಡ 8ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಫವಾಝ್ ಪಿ.ಎವಾದ ಪ್ರತಿವಾದಗಳನ್ನು ಆಲಿಸಿ ಚಾಲಕನಿಗೆ ಐ.ಎಂ.ವಿ ಕಾಯ್ದೆ ಕಲಂ 187ರಡಿ 1 ತಿಂಗಳ ಸಾದಾ ಸಜೆ ಮತ್ತು 5,000 ರೂ. ದಂಡ ಹಾಗೂ ದಂಡ ಕಟ್ಟಲು ತಪ್ಪಿದಲ್ಲಿ 10 ದಿನಗಳ ಸಾದಾ ಸಜೆ ವಿಧಿಸಿದ್ದಾರೆ.

ಕಲಂ: 181ರಡಿ 15 ದಿನಗಳ ಸಾದಾ ಸಜೆ ಹಾಗೂ 1,000 ರೂ. ದಂಡ ಮತ್ತು ದಂಡ ಕಟ್ಟಲು ತಪ್ಪಿದಲ್ಲಿ 7 ದಿನಗಳ ಸಾದಾ ಸಜೆ ವಿಧಿಸಿದ್ದಾರೆ.ಆರ್‌ಸಿ ಮಾಲಕ ಜಗದೀಶ ಚಂದಪ್ಪ ಉರ್ಜಿತ ಲೈಸನ್ಸ್ ಇಲ್ಲದವನಿಗೆ ರಿಕ್ಷಾ ಚಲಾಯಿಸಲು ಅನುಮತಿ ನೀಡಿರುವು ದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಐಎಂವಿ ಕಾಯ್ದೆ ಕಲಂ 180ರಡಿ 15 ದಿನಗಳ ಸಾದಾ ಸಜೆ ಹಾಗೂ 1,000 ರೂ.ದಂಡ ಹಾಗೂ ದಂಡ ಕಟ್ಟಲು ತಪ್ಪಿದಲ್ಲಿ 7 ದಿನಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ಗೀತಾ ರೈ ಹಾಗೂ ಆರೋನ್ ಡಿಸೋಜ ವಿಟ್ಲ ವಾದಿಸಿದ್ದರು.

- Advertisement -

Related news

error: Content is protected !!