
ವಿಟ್ಲ, : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವವು ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು. ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎ.ಎಸ್. ಆದರ್ಶ ಅವರು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳು, ಶಿಸ್ತು ಹಾಗೂ ಗುರಿಸಾಧನೆಯ ಮಹತ್ವವನ್ನು ವೃತ್ತಾಂತಗಳ ಮೂಲಕ ಮನದಟ್ಟುಗೊಳಿಸಿದರು.
ಈ ಸಂದರ್ಭದಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತಿಯಾಗಲಿರುವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಸೇಸಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ವಿತರಿಸಲಾಯಿತು.ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸುವಲ್ಲಿ ಮಹತ್ವದ ಪಾತ್ರವಹಿಸಿದ ಆಲ್ಕಾರ್ಗೋ ಲಾಜಿಸ್ಟಿಕ್ಸ್ ಸಂಸ್ಥೆಯ ಶ್ರೀ ಸವಿಸ್ತಾರ ಆಳ್ವ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ವಿ.ಕೆ.ಎಂ. ಅಶ್ರಫ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೇಶವ ನಾಯ್ಕ್, ಐಕ್ಯೂಎಸಿ ಸದಸ್ಯ ರಮಾನಾಥ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸಂಗೀತಾ ಪಾಣೆಮಜಲು, ಸಾಂಸ್ಕೃತಿಕ ಸಂಘದ ಸಂಚಾಲಕಿ ಡಾ. ಸೌಮ್ಯ ಎಚ್., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಸುಜಾತ ಎಂ.ಕೆ., ವಿದ್ಯಾರ್ಥಿ ಪ್ರತಿನಿಧಿಗಳಾದ ಅಂಕಿತ, ಪಲ್ಲವಿ, ಸಾತ್ವಿಕ್, ಜೀವನ್ ಕುಮಾರ್ ಹಾಗೂ ಅಕ್ಷಿತಾ ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲ ಪ್ರೊ. ಪದ್ಮನಾಭ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಡಾ. ಸೌಮ್ಯ ಎಚ್. ಸ್ವಾಗತಿಸಿದರು.
ಆಂಗ್ಲ ಭಾಷಾ ವಿಭಾಗದ ಪ್ರಾಧ್ಯಾಪಕ ಓಂಪ್ರಕಾಶ್ ವಂದಿಸಿದರು. ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ. ಜ್ಯೋತಿ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನರಂಜನಾ ವಿನೋದಾವಳಿಗಳು ನಡೆಯಿತು.








