ನವದೆಹಲಿ: ‘ಸಕಾರಣವಿಲ್ಲದೇ ಸಂಭೋಗ ನಿರಾಕರಣೆ ಸೇರಿದಂತೆ ನಿರಂತರವಾಗಿ ದಾಂಪತ್ಯದ ಹಕ್ಕುಗಳನ್ನು ನಿರಾಕರಿಸುವುದು ಮಾನಸಿಕ ಕ್ರೌರ್ಯ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 (1) (iಎ) ಅನುಸಾರ ಇದು ವಿಚ್ಛೇದನಕ್ಕೆ ಬಲವಾದ ಆಧಾರವಾಗಿದೆ’ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠವು, ‘ದೈಹಿಕ ಸಂಬಂಧ ತಡೆಯುವುದು ಭಾವನಾತ್ಮಕ ಒತ್ತಡಗಳಿಗೆ ಆಸ್ಪದವಾಗಲಿದೆ. ಅಲ್ಲದೆ, ವಿವಾಹದ ಉದ್ದೇಶಕ್ಕೆ ಧಕ್ಕೆ ತರಲಿದೆ’ ಎಂದಿದೆ.
‘ಕಾನೂನು ಮತ್ತು ಸಾಂವಿಧಾನಿಕ ಆಯಾಮದ ದೃಷ್ಟಿಯಿಂದ ವಿವಾಹವನ್ನು, ವೈಯಕ್ತಿಕ ಹಕ್ಕುಗಳಿಗೆ ಸೀಮಿತಗೊಳಿಸಲಾಗದು. ವಿವಾಹವು ನೇರವಾಗಿ ಪರಸ್ಪರ ಗೌರವ ಹಾಗೂ ನಿರೀಕ್ಷೆ, ಹೊಣೆಗಾರಿಕೆಯ ಸಮಾನ ಹಂಚಿಕೆಯ ಆಧಾರದಲ್ಲಿ ಮೂಡುವ ವೈಯಕ್ತಿಕ, ಸಾಮಾಜಿಕ ಪಾಲುದಾರಿಕೆ ಆಗಿದೆ’ ಎಂದು ಹೇಳಿತು.
‘ದಾಂಪತ್ಯದ ಹಕ್ಕು ಮತ್ತು ಕರ್ತವ್ಯಗಳು ಭಿನ್ನವಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು. ಇದೇ ವೇಳೆ, ದಾಂಪತ್ಯದ ಹಕ್ಕು ನಿರಾಕರಣೆ ಮಾನಸಿಕ ಕ್ರೌರ್ಯ ಎಂಬ ಆಧಾರದಲ್ಲಿ ರಾಜಸ್ತಾನ ಹೈಕೋರ್ಟ್, ಜನವರಿ 2, 2025ರಲ್ಲಿ ನೀಡಿದ್ದ ವಿಚ್ಛೇದನ ಆದೇಶವನ್ನು ಸುಪ್ರೀಂ ಪೀಠವು ಎತ್ತಿಹಿಡಿಯಿತು.
ದಂಪತಿ 15 ವರ್ಷದಿಂದ ಪ್ರತ್ಯೇಕವಾಗಿ ಇದ್ದರು. ಮಕ್ಕಳಿರಲಿಲ್ಲ. ಕೋರ್ಟ್‌ಗಳ ಪುನರಾವರ್ತಿತ ಯತ್ನಗಳ ನಂತರವೂ ಸಮನ್ವಯ ಮೂಡಿರಲಿಲ್ಲ’ ಎಂದು ರಾಜಸ್ತಾನ ಹೈಕೋರ್ಟ್ ವಿಚ್ಚೇದನ ಪ್ರಕರಣದ ತೀರ್ಪು ನೀಡುವಾಗ ಅಭಿಪ್ರಾಯಪಟ್ಟಿತ್ತು.
ಉಲ್ಲೇಖಿತ ಪ್ರಕರಣದಲ್ಲಿ ದಂಪತಿ 2007ರಲ್ಲಿ ವಿವಾಹವಾಗಿದ್ದರು. ಪತಿ-ಪತ್ನಿ ಇಬ್ಬರೂ ಸರ್ಕಾರಿ ವೈದ್ಯರಾಗಿದ್ದರು. ಪತ್ನಿಯು ಗುಜರಾತ್‌ನಲ್ಲಿ ಹಾಗೂ ಪತಿ ರಾಜಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಪತ್ನಿಯು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು.
ಸಂವಿಧಾನದ 142ನೇ ವಿಧಿ ಅನುಸಾರ ದತ್ತವಾದ ಅಧಿಕಾರದಡಿ, ವಿವಾಹವನ್ನು ಅಮಾನ್ಯಗೊಳಿಸಿದ ಪೀಠವು, ‘ಇಂತಹ ‘ಮೃತ ಸಂಬಂಧ’ವನ್ನು ಮುಂದುವರಿಸುವುದು ಇನ್ನಷ್ಟು ಮಾನಸಿಕ ಹಿಂಸೆ ಮತ್ತು ಜುಗುಪ್ಪೆಗೆ ಕಾರಣ ಆಗುವುದಲ್ಲದೇ ಮತ್ತೇನೂ ಆಗುವುದಿಲ್ಲ’ ಎಂದು ಅಭಿಪ್ರಾಯಪಟ್ಟಿತು.







