
ಬೆಂಗಳೂರು, ಜೂ.4: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಲಹೆಯ ಮೇರೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಚಿವ ಸಂಪುಟದ ಖಾತೆ ಹಂಚಿಕೆ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು, ಸಚಿವ ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ ಇಲಾಖೆ ಸೇರಿದಂತೆ ಹಂಚಿಕೆಯಾಗದ ಎಲ್ಲಾ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರಿಗೆ ಕಂದಾಯ ಹಾಗೂ ಕ್ರೀಡಾ ಇಲಾಖೆ ನೀಡಲಾಗಿದೆ. ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ (ಗುಪ್ತಚರ ಹೊರತುಪಡಿಸಿ), ಐಟಿ-ಬಿಟಿ ಹಾಗೂ ಇ-ಆಡಳಿತ ಖಾತೆ ನೀಡಲಾಗಿದೆ. ಯು.ಟಿ. ಖಾದರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಈಶ್ವರ ಖಂಡ್ರೆ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಂಚಿಕೆಯಾಗಿದೆ.
ಕೃಷ್ಣ ಬೈರೇಗೌಡ ಅವರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿಯ ಜವಾಬ್ದಾರಿ ನೀಡಲಾಗಿದ್ದು, ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಗರಾಭಿವೃದ್ಧಿ ಇಲಾಖೆ, ಬೈರತಿ ಸುರೇಶ್ ಅವರಿಗೆ ಸಾರಿಗೆ ಇಲಾಖೆ ಹಾಗೂ ಶರಣ ಪ್ರಕಾಶ್ ಪಾಟೀಲ್ ಅವರಿಗೆ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ನೀಡಲಾಗಿದೆ.ರಾಜ್ಯ ಸರ್ಕಾರದ ಆಡಳಿತ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸುವ ಉದ್ದೇಶದಿಂದ ಈ ಖಾತೆ ಹಂಚಿಕೆ ಜಾರಿಗೆ ಬಂದಿದ್ದು, ಅಧಿಸೂಚನೆ ತಕ್ಷಣದಿಂದಲೇ ಜಾರಿಯಲ್ಲಿದೆ.














